ಮೈಸೂರು: ದೇಶದಲ್ಲಿ ಪ್ರತಿ ವರ್ಷ ಸಾಕಷ್ಟು ಹೊಸ ವಿಶ್ವ ವಿದ್ಯಾಲಯಗಳು ಸ್ಥಾಪನೆಗೊಳ್ಳುತ್ತಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದ ವಿಶ್ವ ವಿದ್ಯಾಲಯಗಳ ಸಂಖ್ಯೆ ಎಷ್ಟು ಎಂಬುದು ಬಹಳ ಮುಖ್ಯ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ‘ಉನ್ನತ ಶಿಕ್ಷಣದಲ್ಲಿ ಸುಶಾಸನ : ಪರಿಕಲ್ಪನೆ ಮತ್ತು ಅನುಷ್ಠಾನ’ ವಿಷಯದ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳ ನಡುವೆ ಆರೋಗ್ಯಕರ ಶೈಕ್ಷಣಿಕ ಸ್ಪರ್ಧೆ ನಡೆಯುವ ಅವಶ್ಯಕತೆ ಇದೆ. ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಉತ್ತಮ ಆಡಳಿತ ಇರಬೇಕು. ಆಂತರಿಕ ಸಮಸ್ಯೆಗಳು ಹೆಚ್ಚಾದರೆ ವಿಶ್ವ ವಿದ್ಯಾಲಯಗಳ ಗುಣಮಟ್ಟ ಕ್ಷೀಣಿಸುತ್ತದೆ. ಹಾಗಾಗಿ ವಿವಿಯಲ್ಲಿ ಎಲ್ಲ ಪ್ರಾಧ್ಯಾಪಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದೇ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು. ಉತ್ತಮ ಆಡಳಿತಕ್ಕೆ ಮೈಸೂರು ಅರಸರು ಮಾದರಿಯಾಗಿದ್ದಾರೆ. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು. ಪ್ರಜಾಪ್ರಭುತ್ವಕ್ಕೆ ನಿರಂತರವಾಗಿ ನೀರೆರೆಯುವ ಕಾರ್ಯವನ್ನು ಮಾಡಿದರು ಎಂದು ಹೇಳಿದರು.