ಜಿಲ್ಲೆ

ಜಾಗತಿಕ ತಾಪಮಾನದಿಂದ ಮೇಘಸ್ಫೋಟ

ಬೇಲೂರು: ಹಿಂದೆಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು ಇದನ್ನು ತಡೆಗಟ್ಟಲು ಜಾಗೃತಿ ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಮಾ.ನ.ಮಂಜೇಗೌಡ ಹೇಳಿದರು.

ಪಟ್ಟಣದ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಯಾದ ಕೊಳವೆ ಬಾವಿಗಳ ಕೊರೆಸುವಿಕೆಯಿಂದ ಅಂತರ್ಜಲ ಕುಸಿತವಾಗಿದೆ. ಪೆಟ್ರೋಲ್, ಡೀಸೆಲ್, ಕಾಂಕ್ರೀಟ್ ರಸ್ತೆ, ವಾಯು ಮಾಲಿನ್ಯದಿಂದ ಓಜೋನ್ ಪದರ ರಂಧ್ರವಾಗಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಮೇಘಸ್ಫೋಟ, ನೀರ್ಗಲ್ಲು ಕರಗುವಿಕೆ, ಸಮುದ್ರಮಟ್ಟ ಏರಿಕೆಯಾಗಿ ಪರಿಸರ ದಿನೇ ದಿನೆ ಹಾಳಾಗುತ್ತಿದೆ. ಮಾನವ- ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತದೆ. ಆದ್ದರಿಂದ ಮನುಷ್ಯರಾದ ನಾವು ಪರಿಸರಕ್ಕೆ ಪೂರಕವಾಗಿ, ಪ್ರಕೃತಿಗೆ ಅನುಗುಣವಾಗಿ ಬದುಕಬೇಕಾಗಿದೆ ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ ಮಾತನಾಡಿ, ಇಂದಿನ ನಾಗರಿಕತೆಯ ಸ್ವೇಚ್ಛಾಚಾರದಿಂದ ನಮ್ಮ ಸುತ್ತಮುತ್ತಲಿನ ಪರಿಸರ, ಪ್ರಕೃತಿ ವಿನಾಶದ ಅಂಚಿಗೆ ತಲುಪುತ್ತಿದೆ. ನೆಲ ಮೂಲದ ಸಂಸ್ಕೃತಿ ಹಾಳಾಗುತ್ತಿದೆ. ಆದ್ದರಿಂದ ಪರಿಸರ ಹಾಗೂ ಪ್ರಕೃತಿಯನ್ನೂ ಪ್ರೀತಿಸಿ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ಮುಂದಾಗಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಪರಮೇಶ್ ಮಡಬಲು, ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವಕುಮಾರ್, ಸಾಹಿತಿ ಇಂದಿರಮ್ಮ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಮೋಹನ್, ಮುಖಂಡರಾದ ತೀರ್ಥಗೌಡ, ಧರ್ಮ ಪ್ರಕೃತಿ, ನಾಗರಾಜ್, ಸೋಂಪುರ ಪ್ರಕಾಶ್, ಪಾಂಡುರಂಗ, ಶಿವರಾಂ ಮಾರ್ಥಂಡ, ಧೂಳಬಾ, ಚಂದ್ರಶೇಖರ್ ಇದ್ದರು.