ಬಾಗಲಕೋಟೆ: ಇಂದು ಜಾಗತಿಕ ಮಟ್ಟದಲ್ಲಿ ಅಪಾಯಗಳು ತಲೆದೋರುತ್ತಿವೆ. ಜಾಗತಿಕ ತಾಪಮಾನದಿಂದ ಭಾರತೀಯರು ಸಂರಕ್ಷಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ನಾವು ಮಾಡುವ ನೀರಿನ ಅಪವ್ಯಯ ಮತ್ತು ಪ್ಲಾಸ್ಟಿಕ ಬಳಕೆಯಂತಹ ಕಾರ್ಯಗಳಿಂದಾಗಿ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಇಂದು ಕಾಡುತ್ತದೆ ಎಂದು ಪರಿಸರ ಪರ್ಯಾವರಣ ಗತಿ-ವಿಽ ರಾಜ್ಯ ಸಂಚಾಲಕ ಜಯರಾಂ ಬುಳ್ಳಾಜೀ ಹೇಳಿದರು.
ನಗರದ ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ 'ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ' ವಿಷಯದ ಮೇಲೆ ಮಾತನಾಡಿದ ಅವರು, ಇಂದು ಸಾಗರವು ಕೂಡಾ ಸುರಕ್ಷಿತವಾಗಿ ಉಳಿದಿಲ್ಲ. ಪ್ರತಿನಿತ್ಯ ಬಳಸುವ ಪ್ಲಾಸ್ಟಿಕನಂತಹ ವಿಷಪೂರಿತ ವಸ್ತುಗಳ ಬಳಕೆಯಿಂದಾಗಿ ಮನೆಯ ಅಂಗಳದಿಂದ ಚರಂಡಿಗೆ, ಚರಂಡಿಯಿಂದ ನದಿಗೆ, ನದಿಯಿಂದ ಸಾಗರಕ್ಕೆ ಸ್ಥಳಾಂತರಗೊಳ್ಳುವ ಪ್ಲಾಸ್ಟಿಕ ಜಲಚರ ಜೀವಿಗಳಿಗೆ ಕಂಟಕವಾಗಿ ಪರಿಣಮಿಸಿದೆ ಎಂದರು.
ಪ್ರತಿಯೊಬ್ಬ ಭಾರತೀಯನು ಮರ ಬೆಳಸುವ ಮೂಲಕ ಜಾಗತೀಕ ತಾಪಮಾನವನ್ನು ನಿಯಂತ್ರಿಸಬೇಕಾಗಿದೆ. ನೀರಿನ ಅಪವ್ಯಯವನ್ನು ತಡೆಗಟ್ಟುವ ಮೂಲಕ ಅಂತರ್ಜಲವನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಡಾ. ಗಿರೀಶ ಮಾಸೂರಕರ ಮಾತನಾಡಿ, ವಿದ್ಯಾರ್ಥಿಗಳು ತಾವು ವಾಸಿಸುವ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಗುರುತರ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಸೇವಿಸುವ ಆಹಾರ, ಕುಡಿಯುವ ನೀರು ಹೇಗಿರಬೇಕು ಎಂಬುದರ ಕಡೆ ಗಮನ ಹರಿಸಬೇಕು. ಪರಿಸರ ಶುಬ್ರವಾಗಿಟ್ಟುಕೊಂಡರೆ ರೋಗರುಜಿನಗಳಿಂದ ಪಾರಾಗಬಹುದು ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿ ಸುರೇಶ ಪರ್ವತಿಕರರವರು ಮಾತನಾಡಿದರು. ತಾಲೂಕಾ ಸಂಯೋಜಕ ರಾಘವೇಂದ್ರ ಯಾದಗಿರಿ ಉಪಸ್ಥಿತರಿದ್ದರು. ಪ್ರಾಚಾರ್ಯ ಅಶೋಕ ಕೆ. ಕಂದಗಲ್ಲ ಸ್ವಾಗತಿಸಿದರು. ಡಾ.ಉಮೇಶ ತಿಮ್ಮಾಪುರ ನಿರೂಪಿಸಿದರು.