ಕಮಲಾಪುರ: ಭಾರತ ಶರಣರು, ಸಂತರು ನಡೆದಾಡಿದ ಪುಣ್ಯ ಭೂಮಿ, ಅವರ ಮಾರ್ಗದಲ್ಲಿ ಬದುಕಿದರೆ ನೆಮ್ಮದಿ ಜೀವನ ನಮ್ಮದಾಗುತ್ತದೆ. ಮಠ- ಮಂದಿರಗಳು ಜನರಲ್ಲಿ ನೈತಿಕ ಮೌಲ್ಯ ಹಾಗೂ ಸಂಸ್ಕಾರ ಬೆಳೆಸುತ್ತಿವೆ ಎಂದು ಶಿವಮೊಗ್ಗ ಜಿಲ್ಲೆಯ ಗೋನಿಬೀಡು ಮತ್ತು ಕುರಿಕೋಟಾದ ಶ್ರೀ ಡಾ.ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಕುರಿಕೋಟಾದಲ್ಲಿ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪ್ರವಚನ ಮಂಗಲ, ರಥೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಗತ್ತಿನ ಬಹುತೇಕ ನಾಗರಿಕತೆಗಳು ನಶಿಸಿ ಹೋಗಲು ಆಂತರಿಕ ಮೌಲ್ಯಗಳ ಕೊರತೆಯೇ ಮುಖ್ಯ ಕಾರಣ. ನಮ್ಮ ನಾಗರಿಕತೆ ಇಂದಿಗೂ ಜೀವಂತವಿದೆ ಎಂದರೆ ಅದಕ್ಕೆ ಶರಣರು, ಸಂತರೇ ಕಾರಣ ಎಂದರು.
ಸರಡಗಿಯ ಶ್ರೀ ರೇವಣಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಕುರಿಕೋಟಾದಲ್ಲಿರುವ ಶಿವಲಿಂಗೇಶ್ವರ ಮತ್ತು ಚಿಕ್ಕವೀರೇಶ್ವರ ಮಠಗಳು ಮುಳುಗಡೆ ಪ್ರದೇಶದಲ್ಲಿವೆ. ಅಗತ್ಯ ಪ್ರಮಾಣದ ಅನುದಾನ ಬಂದಿಲ್ಲ, ಹೀಗಿದ್ದರೂ ಅಧಿಕಾರಿಗಳು ಬಂದು ಜಾಗ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ. ನಾವು ಎಲ್ಲಿಗೆ ಹೋಗಬೇಕು ? ಜನಪ್ರತಿನಿಧಿಗಳು ಗಮನ ಹರಿಸಿ, ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ರೇವೂನಾಯಕ ಬೆಳಮಗಿ ಇತರರಿದ್ದರು.