ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಪ್ರವಾಹ ನಿರ್ವಹಣೆ, ಕುಡಿಯುವ ನೀರು ಹಾಗೂ ಡೆಂಘೆ ನಿಯಂತ್ರಣ ಕುರಿತು ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು. 
ಜಿಲ್ಲೆ

ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹ ಉಂಟಾದಲ್ಲಿ ನಿರ್ವಹಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಗುರುವಾರ ಪ್ರವಾಹ ನಿರ್ವಹಣೆ, ಕುಡಿಯುವ ನೀರು ಹಾಗೂ ಡೆಂಗಿ ನಿಯಂತ್ರಣ ಕುರಿತು ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಾವಾರು ಈಗಾಗಲೇ ನೇಮಿಸಲಾದ ನೋಡಲ್ ಅಽಕಾರಿಗಳು ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಬಗ್ಗೆ ಕ್ರೀಯಾ ಯೋಜನೆ ಸಲ್ಲಿಸಬೇಕು. ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಲು ಸೂಚಿಸಿದರು.

ಪ್ರವಾಹ ಬಂದಾಗ ನೋಡಲ್ ಅಧಿಕಾರಿಗಳ ಜವಾಬ್ದಾರಿ ಬಹಳ ಮಹತ್ವದ್ದಾಗಿದ್ದು, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಅವರು ಪ್ರವಾಹ ಸಂದರ್ಭದಲ್ಲಿ ಮುಂಜಾಗ್ರತವಾಗಿ ಕೈಗೊಂಡ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ಗೊತ್ತಾಗಬೇಕು. ಅಂದಾಗ ಮಾತ್ರ ಅಽಕಾರಿಗಳ ಮೇಲೆ ಬಗ್ಗೆ ನಂಬಿಕೆ ಬರಲು ಸಾಧ್ಯವಾಗುತ್ತದೆ. ಸ್ವಚ್ಚತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ತಾಲೂಕಾವಾರು ರಚಿಸಿದ ತಂಡ ಸಭೆ ನಡೆ ಕರೆದಿದ್ದಿರಾ? ಏಕೆ ಮಾಡಿಲ್ಲ. ಪ್ರತಿ ಗುರುವಾರ ಜಿಲ್ಲಾ ಹಂತದಲ್ಲಿ ಸಭೆ ನಡೆಸಲಾಗುತ್ತಿದ್ದು, ಇದರ ಮುನ್ನಾ ದಿನ ತಾಲೂಕಾ ಮಟ್ಟದಲ್ಲಿ ಸಭೆ ನಡೆಸಲು ಸೂಚಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕಲುಷಿತ ನೀರು ಪೂರೈಕೆಯಾಗದಂತೆ ಕ್ರಮವಹಿಸಬೇಕು. ನೀರಿನ ಮೂಲದಿಂದ ಕೊನೆಯವರೆಗೆ ಸರಬರಾಜು ಆಗುತ್ತಿರುವ ಬಗ್ಗೆ ಪ್ರತಿದಿನ ಪರಿಶೀಲನೆ ನಡೆಸಬೇಕು. ತೊಂದರೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು. ಕುಡಿಯುವ ನೀರು ಪರಿಶೀಲನೆ ಕಾಟಾಚಾರವಾಗಿರಬಾರದು. ಕೇವಲ ಕೆಳಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರೆ ಸಾಲದು ಹೇಳಿದ ಕಾರ್ಯ ಮಾಡುತ್ತಿರುವ ಬಗ್ಗೆ ನಿಗಾವಹಿಸುವುದು ಅಗತ್ಯವಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವಾಗಬೇಕು. ಕಚೇರಿಗೆ ಜನರು ಹೋದಾಗ ಅಧಿಕಾರಿಗಳು ಲಭ್ಯವಿರುವದಿಲ್ಲವೆಂಬ ದೂರುಗಳು ಕೇಳಿ ಬರುತ್ತಿವೆ. ಜನರಿಗೆ ಅಧಿಕಾರಿಗಳು ಸಿಗುತ್ತಿಲ್ಲವೆಂಬ ಭಾವನೆ ಮುಖ್ಯಮಂತ್ರಿಗಳಲ್ಲಿ ಇದೆ ಎಂದರು.

ಸಾರ್ವಜನಿಕರಿಂದ ಬಂದಂತ ಅರ್ಜಿಗಳು ಸಕಾಲಕ್ಕೆ ವಿಲೆ ಆಗದೇ ಇರುವದರಿಂದ ಜಿಲ್ಲೆಯ ಪ್ರಗತಿಯಲ್ಲಿ ಕುಂಟಿತವಾಗುತ್ತಿದೆ. ಅಧಿಕಾರಿಗಳು ತಾವು ಕೆಲಸ ಮಾಡುವ ಜಿಲ್ಲೆಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಬಗ್ಗೆ ಅರಿತುಕೊಳ್ಳಬೇಕು. ಅಲ್ಲಿನ ಸಾಕ್ಷರತೆ, ಶಿಕ್ಷಣ, ತಲಾ ಆದಾಯ ಮೊದಲಾದವು ಕುರಿತು ತಿಳಿದುಕೊಂಡಿರಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜನರ ಬದಲಾವಣೆ ಕಂಡುಕೊಳ್ಳಲು ನಮ್ಮ ಪಾತ್ರವೇನು ಎಂಬುದನ್ನು ಅರಿತು ಕೆಲಸ ನಿರ್ವಹಿಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಯೋಜನಾ ನಿರ್ದೇಶಕ ಎನ್.ವೈ.ಬಸರಿಗಿಡದ ಸೇರಿದಂತೆ ಜಿಲ್ಲಾ ಮಟ್ಟದ ಅಽಕಾರಿಗಳು ಉಪಸ್ಥಿತರಿದ್ದರು.