ಹನೂರು: ನೀಡಿರುವ ಜವಾಬ್ದಾರಿಯನ್ನು ಸಮಪರ್ಕವಾಗಿ ನಿರ್ವಹಿಸುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ಆಯೋಜಿಸಿದ್ಧ ಸ್ವಚ್ಛತಾ ನೌಕರರು ಹಾಗೂ ಭದ್ರತಾ ಸಿಬ್ಬಂದಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಮ.ಬೆಟ್ಟ ಧಾರ್ಮಿಕ ಯಾತ್ರಸ್ಥಳ. ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದ್ದರಿಂದ ನೈರ್ಮಲ್ಯವನ್ನು ಕಾಪಾಡುವುದು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಭದ್ರತೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ ಪ್ರತಿಯೊಬ್ಬರೂ ತಮಗೆ ವಹಿಸಲಗಿರುವ ಕೆಲಸವನ್ನು ಅಚ್ಚುಕಟ್ಟಾಗಿ ಹಾಗೂ ಭಕ್ತಸ್ನೇಹಿಯಾಗಿ ನಿರ್ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಏನಾದರೂ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದರು.
ನಮಗೆ ವರ್ಷಕ್ಕೆ ಒಂದು ಜೊತೆ ಮಾತ್ರ ಸಮವಸ್ತ್ರ ಹಾಗೂ ಶೂ ನೀಡಲಾಗುತ್ತಿದೆ. ನಿತ್ಯ ಸಮವಸ್ತ್ರ, ಶೂ ಧರಿಸಬೇಕಾಗಿರುವುದರಿಂದ ಬಾಳಿಕೆ ಬರುತ್ತಿಲ್ಲ. ಜತೆಗೆ ಪ್ರಾಧಿಕಾರದ ಕಚೇರಿಯ ಗೇಟ್, 108 ಪ್ರತಿಮೆ ಸ್ಥಳ, ದಾಸೋಹ ಭವನ ಹಾಗೂ ಇತರ ಕಡೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಚೌಕಿ ಇಲ್ಲ. ಇನ್ನು ಮ.ಬೆಟ್ಟಕ್ಕೆ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪ್ರಾಧಿಕಾರದಿಂದ ವಾಹನ ಸೌಕರ್ಯ ಕಲ್ಪಿಸಲಾಗಿದ್ದು, ಇದೀಗ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ದ್ವಿಚಕ್ರ ವಾಹನದಲ್ಲಿ ತರಬೇಕಾಗಿದೆ. ಆದ್ದರಿಂದ ಪೆಟ್ರೋಲ್ ವೆಚ್ಚ ಭರಿಸುವಂತೆ ನೌಕರರು ಮನವಿ ಮಾಡಿದರು.
ಮನವಿ ಆಲಿಸಿದ ಸರಸ್ವತಿ, ಸ್ಥಳದಲ್ಲಿದ್ದ ಏಜೆನ್ಸಿ ವ್ಯವಸ್ಥಾಪಕ ಸಿದ್ದೇಶ್ ಅವರಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ, ಶೂ ವಿತರಿಸುವಂತೆ ಸೂಚಿಸಿದರು. ಅಲ್ಲದೆ ಚೌಕಿ ನಿರ್ಮಿಸುವ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು. ಜತೆಗೆ ಪೆಟ್ರೋಲ್ ವೆಚ್ಚವನ್ನೂ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಇತರ ವಿಭಾಗದ ನೌಕರರು ಇದ್ದರು.