ಜಿಲ್ಲೆ

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ

ಚಿತ್ರದುರ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮ ಜವಾಬ್ದಾರಿಗಳನ್ನರಿತು ಕಾರ್ಯ ನಿರ್ವಹಿಸುವಂತೆ ವೆಚ್ಚ ವೀಕ್ಷಕಿ ಪ್ರಾಜಕ್ತಾ ಪಿ.ಠಾಕೂರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಗೆ ನಿಯೋಜಿತರಾಗಿರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.
ಈವರೆಗೆ ನಿರ್ವಹಿಸಿದ ಕೆಲಸ-ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅತ್ಯಂತ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಗೆ ಪ್ರವೇಶಿಸಬಹುದಾದ ಮಾದಕ ವಸ್ತು, ಮದ್ಯ, ಮೌಲ್ಯಯುತ ಸರಕುಗಳು, ನಗದು ಸೇರಿ ಅಕ್ರಮ ವಹಿವಾಟಿನ ಬಗ್ಗೆ ವಿಶೇಷ ಗಮನಹರಿಸಬೇಕು. ತಾವು ನಿರ್ವಹಿಸಿದ ಕಾರ್ಯ ಹಾಗೂ ಕೈಗೊಂಡ ಕ್ರಮಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರೊಂದಿಗೆ ಸಕಾಲದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ಹೇಳಿದರು.
ಪ್ರಚಾರ ಸಾಮಗ್ರಿಗಳು, ಜಾಹೀರಾತು ಖರ್ಚು-ವೆಚ್ಚಗಳ ಬಗ್ಗೆ ಗಮನಹರಿಸಬೇಕು. ಸಂಬಂಧಿತ ಸಮಿತಿಗಳ ಅಧಿಕಾರಿಗಳು ಕಾಲಕಾಲಕ್ಕೆ ಇವುಗಳ ಕುರಿತು ವೆಚ್ಚನಿರ್ವಾಹಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವು ಸಮಿತಿಗಳನ್ನು ರಚಿಸಿ, ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಕ್ರಮ ತಡೆಗೆ ಜಿಲ್ಲಾದ್ಯಂತ ನಿರಂತರ ಕಣ್ಗಾವಲು ಇರಿಸಲಾಗಿದೆ. ಪೆಟ್ರೋಲ್ ಬಂಕ್, ಬ್ಯಾಂಕ್‌ಗಳಲ್ಲಿ ಅಸಹಜ ವಹಿವಾಟು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸರಕು ಸಾಗಾಣಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಶೇ.70ಕ್ಕಿಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳ ಪ್ರದೇಶದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಪಿ ಧರ್ಮೇಂದರ್ ಕುಮಾರ್‌ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಅಗತ್ಯವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈವರೆಗೆ ಯಾವುದೇ ಅಹಿತಕರ ಘಟನೆಗಳ ವರದಿಯಾಗಿಲ್ಲ ಎಂದರು.
ಜಿಪಂ ಸಿಎಒ ಡಿ.ಆರ್.ಮಧು, ಅಬಕಾರಿ ಡಿಸಿ ಡಾ.ಬಿ.ಮಾದೇಶ್ ಮತ್ತಿತರರು ಇದ್ದರು.

*ಟೋಲ್ ಫ್ರೀ ಸಂಖ್ಯೆ 1950
ಸಾರ್ವಜನಿಕರು ಚುನಾವಣೆ ಪ್ರಕ್ರಿಯೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಮತ್ತು ದೂರುಗಳಿದ್ದಲ್ಲಿ ಟೋಲ್ ಫ್ರೀ 1950 ಸಂಖ್ಯೆಗೆ ಸಂಪರ್ಕಿಸಬಹುದು. ಕರೆ ಆಧರಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ದೂರದಾರರ ವಿವರಗಳನ್ನು ಗೌಪ್ಯವಾಗಿ ಇರಿಸಲಾಗುವುದು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಸಿ-ವಿಜಿಲ್ ಮೊಬೈಲ್ ಆ್ಯಪ್ ಮೂಲಕವೂ ಮಾಹಿತಿ ನೀಡಬಹುದೆಂದು ಡಿಸಿ ಹೇಳಿದರು.

*ರೇಷ್ಮೆ ಸೀರೆ ವಶ
ಚಿತ್ರದುರ್ಗದ ಹೊಳಲ್ಕೆರೆ ರಸ್ತೆ ತಿರುಮಲ ಡಾಬಾ ಬಳಿ ಚೆಕ್‌ಪೋಸ್ಟ್ ಸಿಬ್ಬಂದಿ ಗುರುವಾರ ರಾತ್ರಿ 150 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಿಗೆ ಅಗತ್ಯ ದಾಖಲೆ ಇರಲಿಲ್ಲವೆಂದು ತಹಸೀಲ್ದಾರ್ ಡಾ.ನಾಗವೇಣಿ ತಿಳಿಸಿದ್ದಾರೆ.