ಕೊಡೇಕಲ್: ಕಳೆದ ಕೆಲ ದಿಗಳಿಂದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿದ್ದು ಇದರಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಜೀವಕಳೆ ತಂದಿದೆ.
ಜಲಾಶಯದ ಮೇಲ್ಭಾಗದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಬಸವಸಾಗರಕ್ಕೆ ನಿರಂತರವಾಗಿ ನೀರಿ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಭರ್ತಿಯಲ್ಲಿ ಏರಿಳಿತಗಳು ಕಾಣುತ್ತಿವೆ.
ಭಾನುವಾರ ಜಲಾಶಯಕ್ಕೆ ೫೨ ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿರುವ ಕಾರಣ ಆಣೆಕಟ್ಟು ಅಧಿಕಾರಿಗಳು ಜಲಾಶಯದ ನೀರಿನ ಸಂಗ್ರಹಮಟ್ಟ ಕಾಯ್ದುಕೊಂಡು ೧೪ ಮುಖ್ಯಕ್ರಸ್ಟ್ ಗೇಟ್‌ಗಳ ಮೂಲಕ ೩೬೮೨೦ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಮೂಲಕ ೬ ಸಾವಿರ ಕ್ಯೂಸೆಕ್ ಒಟ್ಟು ೪೨೮೨೦ ಕ್ಯೂಸೆಕ್ ಪ್ರಮಾಣ ನೀರು ಕೃಷ್ಣೆಗೆ ಬಿಡಲಾಗುತ್ತಿದೆ.
೪೯೨.೨೫೨ ಮೀ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಬಸವಸಾಗರದಲ್ಲಿ ಸದ್ಯ ೪೯೦.೪೪ ಮೀ ನೀರು ಸಂಗ್ರಹವಿದ್ದು, ೩೩.೩೧೩ ಟಿಎಂಸಿ ಗರಿಷ್ಠ ನೀರು ಸಂಗ್ರಹದ ಜಲಾಶಯದಲ್ಲಿಗ ೨೫.೬೬ ಟಿಎಂಸಿ ನೀರು ಸಂಗ್ರಹವಾಗಿದ್ದು ಜಲಾಶಯ ಶೇ.೭೭ಭರ್ತಿಯಾಗಿದೆ.
ಒಂದು ವೇಳೆ ಮಹಾರಾಷ್ಟçದ ಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾದರೆ ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹೆಚ್ಚಾಗಲಿದೆ. ಈಗಾಗಲೇ ಜಲಾನಯನ ಪ್ರದೇಶದಲ್ಲಿ ಮಳೆ, ಮಲಫ್ರಭಾ ನದಿಯ ಒಳಹರಿವು ಮತ್ತು ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ನಿರಂತರವಾಗಿದೆ. ಮೇ ೨೮ರಂದು ೯೫೦ ಕ್ಯೂಸೆಕ್ ಒಳಹರಿವು ಆರಂಭವಾಗಿರುವ ನೀರಿನ ಒಳಹರಿವು ಕ್ರಮೇಣವಾಗಿ ಏರಿಕೆಯಾಗುವ ಮೂಲಕ ಜಲಾಶಯಕ್ಕೆ ಕಳೆ ತರುತ್ತಿದೆ, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಒಳಹರಿವಿನಲ್ಲಿ ಏರಿಳಿತಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಅಧಿಕಾರಿಗಳು ಜಲಾಶಯದ ನೀರಿನ ಸಂಗ್ರಹಮಟ್ಟ ಕಾಯ್ದುಕೊಂಡು ನದಿಗೆ ನೀರು ಹರಿಸುತ್ತಿದ್ದಾರೆ.
ಈಗಾಗಲೇ ಜಲಾಶಯಕ್ಕೆ ಅಪಾರ ಪ್ರಮಾಣದ ನೀರಿನ ಒಳಹರಿವು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ಮಟ್ಟ ಕಾಯ್ದಕೊಂಡು ಕೃಷ್ಣಾ ನದಿ ಮತ್ತು ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಉಪ ಕಾಲುವೆಗಳಿಗೆ ನೀರು ಹರಿಯದ ಕಾರಣ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಚಿತ್ತ ಇದೀಗ ಮುಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆಗೆ ನೀರು ಹರಿಸುವ ಕುರಿತಾಗಿ ನಡೆಯುವ ಸಲಹಾ ಸಮಿತಿ ಸಭೆಯತ್ತ ರೈತರ ಚಿತ್ತ ನೆಟ್ಟಿದ್ದು, ಜುಲೈ ೧ರಂದು ಬೆಂಗಳೂರಿನಲ್ಲಿ ಅಬಕಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ನಿಗಮದ ಮುಖ್ಯ ಅಭಿಯಂತರ ಆರ್.ಮಂಜುನಾಥ ತಿಳಿಸಿದ್ದಾರೆ.