ಹೆಚ್ಚು ಮಳೆಯಾದರೆ ಪರಿಸ್ಥಿತಿ ಎದುರಿಸಲು ಮೇಜರ್ ಬಸವಪ್ರಭು ನೇತೃತ್ವದ ಎನ್‌ಡಿಆರ್‌ಎಫ್ ತಂಡ ಚುಳಕಿನಾಲಾ ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಸೇನಾಧಿಕಾರಿಗಳಾದ ಅಭಯಕುಮಾರ, ಸಂಜೀವಕುಮಾರ, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಸಂದೀಪ ಪಾಟೀಲ್, ಮುಜ್ಮುಲ್ ಪಟೇಲ್, ಡಾ.ರಮೇಶಬಾಬು ಚಂದ್ರಕಾಂತ ಸಕ್ಕರಬಾವಿ ಇದ್ದರು. 
ಜಿಲ್ಲೆ

ಜಲಾಶಯಕ್ಕೆ ಎನ್‌ಡಿಆರ್‌ಎಫ್ ತಂಡ ಭೇಟಿ

ಬಸವಕಲ್ಯಾಣ: ಮುಂಗಾರು ಪೂರ್ವ ಎರಡು ವಾರದ ಹಿಂದೆ ಮಳೆ ಅಬ್ಬರಿಸಿದ್ದು, ಈಗ ಮುಂಗಾರು ಮಳೆ ಆರಂಭವಾಗಿದೆ. ಹೆಚ್ಚಿನ ಮಳೆ ಆದರೆ, ಜಲಾಶಯ, ನದಿ ತೀರದ ಜಲಾನಯನ ಪ್ರದೇಶ, ಕೆರೆ ಕಟ್ಟೆಗಳಿಗೆ ಹೆಚ್ಚಿನ ನೀರು ಬಂದು ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡ ಇತ್ತೀಚೆಗೆ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಮೇಜರ್ ಬಸವಪ್ರಭು ನೇತೃತ್ವದಲ್ಲಿ ಸೇನಾಧಿಕಾರಿಗಳಾದ ಅಭಯಕುಮಾರ, ಸಂಜೀವಕುಮಾರ ಅವರ ತಂಡ ತಾಲೂಕಿನ ಮುಲ್ಲಾಮಾರಿ ಜಲಾಶಯ, ಕೋಹಿನೂರ ಮತ್ತು ಅಟ್ಟೂರ ಕೆರೆ ಪ್ರದೇಶ ಹಾಗೂ ಹುಲಸೂರು ತಾಲೂಕಿನ ವ್ಯಾಪ್ತಿಯ ಚುಳಕಿನಾಲಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು.

ಕಳೆದ ವರ್ಷ ಒಂದೇ ದಿನ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಅಟ್ಟೂರ್ ಮತ್ತು ಕೋಹಿನೂರು ಕೆರೆ ಒಡೆದು ಹೊಲಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿತ್ತು. ಸೇತುವೆ, ರಸ್ತೆ ಕೊಚ್ಚಿಕೊಂಡು ಹೋಗಿ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.

ಬೀದರ್ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಸಂದೀಪ ಪಾಟೀಲ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮುಜ್ಮುಲ್ ಪಟೇಲ್, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಗ್ರೇಡ್-೨ ತಹಸೀಲ್ದಾರ್ ಡಾ.ರಮೇಶಬಾಬು, ಕೆಎನ್‌ಎನ್‌ಎಲ್ ಎಎ ಚಂದ್ರಕಾಂತ ಸಕ್ಕರಬಾವಿ ಜತೆಗಿದ್ದು ಮಾಹಿತಿ ನೀಡಿದರು.