ಜಿಲ್ಲೆ

ಜಲಾಶಯ, ಕೆರೆ ಕಾಮಗಾರಿ ಕಳಪೆ

ಮೊಳಕಾಲ್ಮೂರು: ರಂಗಯ್ಯನದುರ್ಗ ಜಲಾಶಯ ಹಾಗೂ ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಆಗಿರುವ ಕೆಲಸಗಳು ಸಂಪೂರ್ಣ ಕಳಪೆ ಹಾಗೂ ಲೋಪವೇ ತುಂಬಿ ತುಳುಕುತ್ತಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಹಾಗೂ ರಂಗಯ್ಯನದುರ್ಗ ಜಲಾಶಯದ ನೀರು ಬಳಕೆ ಸಾಧಕ-ಬಾಧಕ ಕುರಿತು ತಾಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹತ್ತು ವರ್ಷದಲ್ಲಿ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು ಪ್ರಗತಿ ಕಾಆಣದೆ ತಪ್ಪು ಹಾದಿ ಹಿಡಿದಿವೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಶೇಷವಾಗಿ ಜಲಾಶಯ ಮತ್ತು ಕೆರೆಗಳ ಏರಿ, ತೂಬು, ಕಾಲುವೆ ಅಭಿವೃದ್ಧಿಗೆ ಬಿಡುಗಡೆಯಾದ ಕೋಟ್ಯಂತರ ರೂ. ಅನುದಾನ ದುರ್ಬಳಕೆಯೇ ಹೆಚ್ಚು ಆಗಿದೆ. ಪರಿಣಾಮ ಮಳೆಗಾಲದಲ್ಲಿ ಸಂಗ್ರಹವಾಗಿದ್ದ ನೀರು ಸೂರಿಕೆಯಿಂದ ತಳಮಟ್ಟಕ್ಕೆ ಹೋಗಿವೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷೃ ಧೋರಣೆಯೇ ಮುಖ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡರೆ ಈ ಭಾಗದ ಜನರ ಬದುಕು ಹಸನಾಗಲಿದೆ. ಮೊಳಕಾಲ್ಮೂರಿಗೆ ಬರಬೇಕಿದ್ದ ನೀರಿನ ಕಾಲುವೆ ಪೈಪ್‌ಲೈನ್ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಚಿತ್ರದುರ್ಗ ಸಮೀಪ ಬೆಳಗಟ್ಟದಲ್ಲಿಯೇ ಸ್ಥಗಿತಗೊಂಡಿದೆ. ಈ ಕಾರ್ಯ ಒಂದೆರಡು ವರ್ಷದಲ್ಲಿ ಪೂರ್ಣಗೊಳಿಸಲು ಹಠದಿಂದ ಸಾಧಿಸುತ್ತೇನೆ ಎಂದರು.

0.5 ಟಿಎಂಸಿ ಅಡಿ ಸಾಮರ್ಥ್ಯದ ರಂಗಯ್ಯನದುರ್ಗ ಜಲಾಶಯ 1 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ವಿಸ್ತರಣೆ ಮಾಡಿದರೆ ಅಚ್ಚುಕಟ್ಟು ಪ್ರದೇಶಕ್ಕೂ ನೀರು ಹರಿಸುವ ಜತೆಗೆ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಇದರ ಸಾಧಕ-ಬಾಧಕದ ವರದಿ ಸಂಗ್ರಹಿಸಿ ಸರ್ಕಾರಕ್ಕೆ ಹೆಚ್ಚಿನ ಅನುದಾನ ಕೋರಲಾಗುವುದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಎಚ್.ಟಿ.ನಾಗೀರಡ್ಡಿ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಹಸಿರುಕರಣಕ್ಕಾಗಿ ಶಾಶ್ವತ ನೀರಾವರಿ ಮೂಲ ಅಗತ್ಯತೆ ಇದೆ. ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕು ಮುಟ್ಟಿಸಬೇಕು ಎಂದು ಮನವಿ ಮಾಡಿದರು.

ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಅಣ್ಣಪ್ಪ ಮಾತನಾಡಿ, ಪ್ರಸ್ತುತ ಜಲಾಶಯದಲ್ಲಿ 20 ಅಡಿ ನೀರಿನ ಪೈಕಿ 5 ಅಡಿ ನೀರು ಡೆಡ್ ಸ್ಟೋರೆಜ್‌ಗೆ ಮೀಸಲು. ಉಳಿದ 10 ಅಡಿ ನೀರನ್ನು ಪಟ್ಟಣಕ್ಕೆ ಐದಾರು ತಿಂಗಳು ಕುಡಿಯಲು ಬಳಸಬಹುದು. ಆದರೆ, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹಾಯಿಸುವುದು ಕಷ್ಟ ಎಂದು ಮಾಹಿತಿ ನೀಡಿದರು.

ಇದರಿಂದ ಸಿಟ್ಟಿಗೆದ್ದ ರೈತರು, ಕಳೆದ ವರ್ಷ ಹೆಚ್ಚು ಮಳೆ ಆಗಿದ್ದು, ಕೆರೆ-ಕಟ್ಟೆಗಳು ತುಂಬಿದ್ದವು. ನಿಮ್ಮ ನಿರ್ಲಕ್ಷೃದಿಂದ ಈಗ ಬರೀದಾಗಿವೆ ಎಂದು ತರಾಟೆಗೆ ತೆಗೆದುಕೊಂಡರು.

ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಎಂ.ವಿ.ರೂಪಾ, ಮುಖ್ಯ ಇಂಜಿನಿಯರ್ ರಾಧಕೃಷ್ಣ, ರೈತ ಮುಖಂಡರಾದ ಸುಬಾನ್ ಸಾಬ್, ಪಟೇಲ್ ಜಿ.ಪಾಪನಾಯಕ, ಐಯ್ಯಣ್ಣ, ಜಿಂಕಾ ಶ್ರೀನಿವಾಸ, ಜಿ.ಪ್ರಕಾಶ, ಕಲೀಂವುಲ್ಲಾ, ಭಕ್ತಪ್ರಹ್ಲಾದ, ಪಾಲಯ್ಯ, ಪರಮೇಶ್ವರಪ್ಪ, ಎಸ್.ಖಾದರ್, ಗುರುರಾಜಣ್ಣ, ಮಾರಣ್ಣ, ಡಿ.ಪೆನ್ನಯ್ಯ ಇತರರಿದ್ದರು.

ಕ್ಷೇತ್ರದಲ್ಲಿ ಧೀರ್ಘ ಕಾಲ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಜನರ ಸಮಸ್ಯೆಗಳು ಗೊತ್ತಿವೆ. ಅವರು ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ವಿಶೇಷ ಯೋಜನೆ ರೂಪಿಸುವ ಮೂಲಕ ಇಲ್ಲಿನ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.ಶ್ರೀ ಬಸವಲಿಂಗ ಸ್ವಾಮೀಜಿ, ಸಿದ್ದಯ್ಯನಕೋಟೆ ಮಠ