ಜಿಲ್ಲೆ

ಜಲಸಾರಿಗೆ ಮಂಡಳಿ ಆಮೆ ನಡಿಗೆ

ಕಾರವಾರ: ಬಂದರು ಇಲಾಖೆಯ ಕಾರ್ಯವೈಖರಿಗೆ ವೇಗ ನೀಡುವ ಉದ್ದೇಶದಿಂದ ಪ್ರಾರಂಭಿಸಲಾದ ಕರ್ನಾಟಕ ಜಲಸಾರಿಗೆ ಮಂಡಳಿಯ (ಮೆರಿಟೈಮ್ ಬೋರ್ಡ್)ಚಟುವಟಿಕೆ ಆಮೆಗತಿಯಿಂದ ಸಾಗಿದೆ. ಇದೇ ಏಪ್ರಿಲ್ 1ರಿಂದ ಮಂಡಳಿಯ ಲೆಕ್ಕಪತ್ರ ಪ್ರಾರಂಭಿಸಬೇಕು ಎಂಬ ಗುರಿ ಹೊಂದಲಾಗಿದ್ದರೂ ಇದುವರೆಗೂ ಯಾವುದೇ ಪೂರ್ವ ತಯಾರಿ ನಡೆದಿಲ್ಲ.

ಕೈಗಾರಿಕೆಗಳ ಬೆಳವಣಿಗೆಗೆ ವಾಣಿಜ್ಯ ಬಂದರುಗಳು ಅತಿ ಅಗತ್ಯ ಮೂಲ ಸೌಲಭ್ಯವಾಗಿದೆ. ಅವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಶೀಘ್ರದಲ್ಲಿ ಅಭಿವೃದ್ಧಿ ಮಾಡಲು ಸರ್ಕಾರದ ಈಗಿನ ಆಡಳಿತ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಬಂದರುಗಳ ಏಳಿಗೆಗೆ ಬೇಕಾಗಿರುವ ನಿರ್ಣಯವನ್ನು ಖಾಸಗಿ ಸಂಸ್ಥೆಗಳ ಮಾದರಿಯಲ್ಲಿ ತ್ವರಿತವಾಗಿ ಕೈಗೊಳ್ಳಲು ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ರಚಿಸಲಾಗಿದೆ. ಬಂದರು ಇಲಾಖೆ ಮಾಡುವ ಕಾರ್ಯವನ್ನೇ ಈ ಮಂಡಳಿ ಮಾಡಲಿದ್ದು, ಇಲಾಖೆಗೆ ಸಹಕಾರಿಯಾಗಿ ನಿಲ್ಲಲಿದೆ.

2015ರಲ್ಲೇ ಅನುಮೋದನೆ: 2015 ರ ನವೆಂಬರ್ 27 ರಂದು ಕರ್ನಾಟಕ ಜಲಸಾರಿಗೆ ಮಂಡಳಿ ಕರ್ನಾಟಕ ಮೆರಿಟೈಮ್ ಬೋರ್ಡ್ ಅಧಿನಿಯಮಕ್ಕೆ ಸದನದಲ್ಲಿ ಅನುಮೋದನೆ ಸಿಕ್ಕಿತ್ತು. 2017 ರ ಆಗಸ್ಟ್​ನಲ್ಲಿ ರಾಷ್ಟ್ರಪತಿಗಳ ಅಂಕಿತ ಬಿದ್ದು, ಅಧಿಕೃತವಾಗಿ ಕರ್ನಾಟಕ ಮೆರಿಟೈಮ್ ಬೋರ್ಡ್ ರಚನೆಯಾಗಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮಂಡಳಿಯ ಅಧ್ಯಕ್ಷರಾಗಿದ್ದರೆ, ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಸಿಇಒ ನೇಮಕಗೊಳ್ಳಲಿದ್ದಾರೆ. ಕೋಸ್ಟ್​ಗಾರ್ಡ್, ಮೀನುಗಾರಿಕೆ, ಹಣಕಾಸು, ಹೀಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಸೇರಿ ಒಟ್ಟು 15 ಸದಸ್ಯರಿರುವ ಮಂಡಳಿ ಇದಾಗಿದೆ.

ಕಾರ್ಯವ್ಯಾಪ್ತಿ: ಕಿರು ಬಂದರು, ಮೀನುಗಾರಿಕೆ ಬಂದರುಗಳ ಅಭಿವೃದ್ಧಿ, ಮೇಲ್ವಿಚಾರಣೆ, ಒಳನಾಡು ಜಲಸಾರಿಗೆ, ಸಮುದ್ರ ತೀರ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ, ಜಲಸಾರಿಗೆ ವಾಹನಗಳ ನಿರ್ವಹಣೆ ಮಾಡುವ ಗುರಿಯನ್ನು ಮೆರಿಟೈಮ್ ಬೋರ್ಡ್ ಹೊಂದಿದೆ.

  • ಆಗಿರುವ ಕಾರ್ಯಗಳು:
  • ಇದುವರೆಗೂ 5 ಸಭೆಗಳನ್ನು ಮಾಡಲಾಗಿದೆ.
  • ಬಂದರು ಇಲಾಖೆಯ ಆಸ್ತಿಗಳನ್ನು ಹಸ್ತಾಂತರಿಸಿಕೊಳ್ಳಲು ಮೌಲ್ಯಮಾಪನ ಕಾರ್ಯ ಮಾಡಲಾಗಿದೆ.
  • ಕಾರವಾರದಲ್ಲಿ ಕೇಂದ್ರ ಕಚೇರಿ ತೆರೆಯಲಾಗಿದ್ದು, ಬೆಂಗಳೂರಿನ ಖನಿಜ ಭವನದಲ್ಲಿ ಸಂಪರ್ಕ ಕಚೇರಿ ತೆರೆಯಲಾಗಿದೆ.
  • ಮಂಡಳಿಗೆ ಮುಖ್ಯಮಂತ್ರಿ ಅವರನ್ನು ಅಧ್ಯಕ್ಷರನ್ನಾಗಿ, ಬಂದರು ಸಚಿವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
  • ಬಂದರಿನ ಆಸ್ತಿಗಳ ಮೌಲ್ಯ ಪರಿಷ್ಕರಣೆಗೆ ನೀತಿಯನ್ನು ರೂಪಿಸಲಾಗಿದೆ.
  • ಆಗಬೇಕಾಗಿರುವ ಕಾರ್ಯಗಳು:
  • ಬೋರ್ಡ್ ನೌಕರರ ಸಿ ಆಂಡ್ ಆರ್ ರೂಲ್ಸ್ ರಚಿಸಬೇಕು.
  • ಬಂದರು ಇಲಾಖೆಯ ನೌಕರರನ್ನು ಹಸ್ತಾಂತರಿಸಿಕೊಳ್ಳುವುದು ಹಾಗೂ ಅಗತ್ಯ ಹೊಸ ನೌಕರರ ನೇಮಕ.
  • ಬಂದರು ಇಲಾಖೆಯ ಆಸ್ತಿಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಿಕೊಳ್ಳಬೇಕು.
  • ಬೋರ್ಡ್ ಕಾರ್ಯನಿರ್ವಹಣೆ ಹಾಗೂ ವಿವಿಧ ಯೋಜನೆಗಳಿಗೆ ಆದಾಯದ ಮೂಲ ಕಂಡುಕೊಳ್ಳಬೇಕು.

ಪಿಡಬ್ಲ್ಯುಡಿಯಿಂದ ಬೇರ್ಪಟ್ಟ ಬಂದರು: ಇದುವರೆಗೆ ಬಂದರು ಇಲಾಖೆಯು ಲೋಕೋಪಯೋಗಿ ಇಲಾಖೆಯ ಜತೆ ಸೇರಿಕೊಂಡಿತ್ತು. 2020 ರ ಜುಲೈ 15 ರಂದು ಸರ್ಕಾರ ಬಂದರು ಇಲಾಖೆಯನ್ನು ಪಿಡಬ್ಲ್ಯುಡಿಯಿಂದ ಬೇರ್ಪಡಿಸಿ ಮೂಲ ಸೌಲಭ್ಯ ಇಲಾಖೆಗೆ ಸೇರ್ಪಡೆ ಮಾಡಿದೆ. ಆ ಇಲಾಖೆಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಈಗ ಕರ್ನಾಟಕ ಮೆರಿಟೈಮ್ ಬೋರ್ಡ್​ನ ಸಿಇಒ ಕೂಡ ಆಗಿದ್ದಾರೆ.

ಮಂಡಳಿ ಸೇರಲು ಒಪ್ಪದ ನೌಕರರು: ಬಂದರು ಇಲಾಖೆಯಲ್ಲಿ 132 ನೌಕರರಿದ್ದಾರೆ. ಅದರಲ್ಲಿ ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಅವರನ್ನು ಹೊರತುಪಡಿಸಿ ಮತ್ಯಾರೂ ಜಲಸಾರಿಗೆ ಮಂಡಳಿ ಸೇರಲು ಒಪ್ಪಿಗೆ ಸೂಚಿಸಿರಲಿಲ್ಲ. ಇದರಿಂದ ಬಂದರು ಇಲಾಖೆಯ ಎಲ್ಲ ನೌಕರರನ್ನೂ ಜಲಸಾರಿಗೆ ಮಂಡಳಿಗೆ ನಿಯೋಜನೆಯ ಮೇಲೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ಕರ್ನಾಟಕ ಮೆರಿಟೈಮ್ ಬೋರ್ಡ್ ಒಂದು ಹೊಸ ವ್ಯವಸ್ಥೆಯಾಗಿದ್ದರಿಂದ ಅದು ಹಂತ ಹಂತವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದುವರೆಗೆ ಐದು ಸಭೆ ಮಾಡಿ, ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕ್ಯಾ.ಸಿ.ಸ್ವಾಮಿ ಬಂದರು ಇಲಾಖೆ ನಿರ್ದೇಶಕ