ಜಿಲ್ಲೆ

ಜಲಸಂಗ್ರಹಗಾರದ ಮೈಕ್ರೋ ಫೈಬರ್ ಹಾಗೂ ಫಿಲ್ಟರ್ ದುರಸ್ತಿ: ಜನರ ಆರೋಗ್ಯಕ್ಕೆ ಕಂಟಕ

ಅರಸೀಕೆರೆ : ಸುಬ್ರಮಣ್ಯ ನಗರ ಬಡಾವಣೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಕುಡಿಯುವ ನೀರಿನ ಘಟಕದ ಬೃಹತ್ (ಮೈಕ್ರೋಫೈಬರ್)ಶುದ್ಧೀಕರಣ ಯಂತ್ರಗಳ ಕೈಕೊಟ್ಟಿದ್ದು 31 ವಾರ್ಡ್‌ಗಳ ನಿವಾಸಿಗಳು ಕಲುಷಿತ ನೀರು ಸೇವಿಸುವ ಅನಿವಾರ್ಯತೆ ಎದುರಾಗಿದ್ದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ಲೋರೈಡ್ ಪೀಡಿತರ ಸಂಕಷ್ಟ ಅರಿತು ಅಂದಾಜು 121 ಕೋಟಿ ರೂ. ಕೋಟಿ ರೂ.ವೆಚ್ಚದಲ್ಲಿ ಹೇಮಾವತಿ ನದಿ ಮೂಲದಿಂದ ನಗರಕ್ಕೆ ದಿನದ ಇಪ್ಪತ್ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಗೆ ಹಸಿರು ನಿಶಾನೆ ತೋರಿದ್ದರು.

ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್ ಕುಮಾರ್ ವೇಳೆ ಶಿಲಾನ್ಯಾಸ ನೆರವೇರಿಸಿ ಮನೆ, ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆ ನೀಡಿದ್ದರು.ಇದಕ್ಕೆ ಪೂರಕ ಎನ್ನುವಂತೆ ಸುಬ್ರಮಣ್ಯ ನಗರ ಬಡಾವಣೆಗೆ ಹೊದಿಕೊಂಡಂತಿರುವ ಬೆಟ್ಟದ ತಪ್ಪಲಿನಲ್ಲಿ 150 ಲಕ್ಷ ಲೀ. ಸಾಮರ್ಥ್ಯದ ಬೃಹತ್ ಜಲಸಂಗ್ರಹಗಾರ ನಿರ್ಮಾಣ, ಕೊಳವೆ ಪೈಪು, ಮೀಟರ್ ಅಳವಡಿಸಿ ನೀರು ಹರಿಸಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವಸ್ತುಸ್ಥಿತಿ ಅರಿಯದೇ ಜಲಸಂಗ್ರಹಗಾರ ಲೋಕಾರ್ಪಣೆಗೊಳಿಸಿದ್ದರು. ದೊಡ್ಡ ಮೊತ್ತದ ಯೋಜನೆ ಸಾಕಾರಗೊಂಡು 8 ವರ್ಷಕಳೆದರೂ ನೀರು ಶುದ್ಧೀಕರಿಸವ (ಫಿಲ್ಟರ್) ಯಂತ್ರ ದುರಸ್ತಿ ಮಾಡಲಾಗಿಲ್ಲ ಎನ್ನುವ ಸಂಗತಿ ಬೆಚ್ಚಿಬೀಳಿಸಿದೆ. ಇದರಿಂದಾಗಿ ಸರ್ಕಾರದ ಘೋಷಿತ ಉದ್ದೇಶ ಹಳಿತಪ್ಪುವ ಜತೆಗೆ ಜನರ ಆರೋಗ್ಯಕ್ಕೂ ಕಂಟಕ ತಂದಿಟ್ಟಿದ್ದು ಹೋರಾಟದ ಕಿಚ್ಚು ಹಚ್ಚಿದೆ.


ವಾಟರ್ ಫಿಲ್ಟರ್ ಬದಲಿಸುವ ಇಲ್ಲವೇ ರಿಪೇರಿ ಮಾಡಿಸುವ ಕುರಿತು ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳ ಹಗ್ಗಜಗ್ಗಾಟ ಮುಂದುವರಿದಿದ್ದು ಜನರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ನಗರದ ಬಹತೇಕ ಎಲ್ಲ ವಾರ್ಡ್‌ಗಳ ಬಡಾವಣೆಗಳಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯಿರಲಿ, ವಾರದಲ್ಲಿ ಎರಡು ಬಾರಿಯಾದರೂ ನೀರು ಪೂರೈಕೆಯಾದರೆ ಪುಣ್ಯ ಎನ್ನುವಂತಾಗಿದೆ.ಮಣ್ಣು, ಕೆಸರು, ಮೀನು, ಎರೇಹುಳು ಮಿಶ್ರಿತ ಕಲುಷಿತ ನೀರು ಸೇವನೆ ಒಂದೆಡೆಯಾದರೆ ಜನರು ಆರೋಗ್ಯ ರಕ್ಷಣೆಗೆ ಗಡುಸು ಮಿಶ್ರಿತ ಪ್ಲೋರೈಡ್‌ಯುಕ್ತ ನೀರನ್ನು ಕಾಯಿಸಿ ಆರಿಸಿ ಕುಡಿಯುವ ಸನ್ನಿವೇಶ ನಿರ್ಮಾಗೊಂಡಿದೆ.ತೆರಿಗೆ ಪಾವತಿದಾರರಿಗೆ ಶುದ್ಧ ಕುಡಿಯುವ ನೀರು, ಶುಚಿತ್ವ ಒಳಗೊಂಡಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗದ ಕೆಲ ನಗರಸಭಾ ಸದಸ್ಯರು ಸ್ಥಳೀಯರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲದಂತಾಗಿದೆ.ಸದ್ಯದ ಬೆಳವಣಿಗೆ ನಗರಸಭೆ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡಿದ್ದು ಗೋಳು ಹೇಳತೀರದಂತಾಗಿದೆ.


ಚನ್ನರಾಯಪಟ್ಟಣ ತಾಲೂಕಿನ ಘನ್ನಿಗಡ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿರುವ ಹೇಮಾವತಿ ನದಿ ತೀರದಲ್ಲಿ ಪಂಪ್ ಅಳವಡಿಸಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.ಯಂತ್ರಗಾರ ಕೊಠಡಿಯಲ್ಲಿರುವ ಶುದ್ದೀಕರಣ ಮೋಟರ್‌ಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ಬರೋಬ್ಬರಿ 150 ಲಕ್ಷ ಲೀ.ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಪ್ರತಿನಿತ್ಯ 80 ಲಕ್ಷ ಲೀ.ನೀರು ಮನೆಯ ನಳಗಳಿಗೆ ಶುದ್ಧೀಕರಣವಾಗದೇ ಹರಿಯುತ್ತಿದೆ.ನಗರಸಭೆಯಲ್ಲಿನ ರಾಜಕೀಯ ಮೇಲಾಟ,ನೀರೆತ್ತುವ ಯಂತ್ರಗಳ ದೋಷ,ನಿರ್ವಹಣೆ ಕೊರತೆಯಿಂದಾಗಿ ನಗರ ನಿವಾಸಿಗಳು ಬಿಸಿ ನೀರಿನ ಮೊರೆ ಹೋಗಬೇಕಿದೆ.ಜತೆಗೆ ಕ್ಷಯ, ಅಸ್ತಮಾ, ಚರ್ಮರೋಗದಂತಹ ಗಂಭೀರ ರೋಗಗಳಿಗೆ ಬಲಿಯಾಗುವ ಭೀತಿ ಆವರಿಸಿದೆ

ಜಲಸಂಗ್ರಹಗಾರದ ಫಿಲ್ಟರ್ ದುರಸ್ತಿಗೆ ಅಂದಾಜು 3 ಕೋಟಿ ರೂ.ವೆಚ್ಚವಾಗಲಿದೆ ಎಂದು ತಾಂತ್ರಿಕ ಅಧಿಕಾರಿಗಳು ನಗರಸಭೆ ಅಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಜನರ ತೆರಿಗೆ ಹಣದಿಂದ ಸರಿಪಡಿಸಲು ಅಧ್ಯಕ್ಷ ಸಿ.ಗಿರೀಶ್ ಸಲಹೆ ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಬೇರೆಡೆಯಿಂದ ಅನುದಾನ ತರೋಣವೆಂದು ಉತ್ತರ ನೀಡುತ್ತಿರುವುದು ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.ಇದರಿಂದಾಗಿ ಲೋಪ ಸರಿಪಡಿಸಲು ವಿಳಂಬವಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ನಗರ ನಿವಾಸಿಗಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನೀರು ಶುದ್ಧೀಕರಿಸಲು ಮುಂದಾಗುವರೇ ಅಥವಾ ಆರೋಪ, ಪ್ರತ್ಯಾರೋಪ ಮಾಡುತ್ತಾ ಜನರ ಆರೋಗ್ಯ ರಕ್ಷಣೆ ವಿಷಯದಲ್ಲಿ ಚೆಲ್ಲಾಟವಾಡುವರೇ ಎಂಬುದನ್ನು ಕಾದುನೋಡಬೇಕಿದೆ.

*ಜಲಸಂಗ್ರಹಗಾರದ ಮೈಕ್ರೋ ಫೈಬರ್ ಹಾಗೂ ಫಿಲ್ಟರ್ ದುರಸ್ತಿ ಕುರಿತು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು 3.19 ಕೋಟಿ ರೂ.ಅನುದಾನ ಬಳಕೆ ಮಾಡಿಕೊಳ್ಳಲು ಸಮ್ಮತಿಸಿದ್ದು ಟೆಂಡರ್ ಕರೆಯಲು ಅನುಮತಿ ನೀಡಿದ್ದೇನೆ.ಆದರೆ ಶಾಸಕರು ರಾಜ್ಯ ನೀರು ಸರಬರಾಜು ಸಂಸ್ಥೆ(ಕೆಯುಡಬ್ಲೂ ಎಸ್)ನಿಂದ ಅನುದಾನ ಹಾಕಿಸುತ್ತೇನೆ ಎನ್ನುತ್ತಿದ್ದಾರೆ.ಇದರಿಂದಾಗಿ ಸಮಸ್ಯೆ ಜಟಿಲವಾಗಿದ್ದು ಆರೋಗ್ಯ ರಕ್ಷಣೆ ದೃಷ್ಟಿಯಿಂದ ಜನರು ಕೆಲ ದಿನಗಳು ಬಿಸಿ ನೀರನ್ನು ಬಳಕೆ ಮಾಡುವಂತೆ ನಗರಸಭೆ ವತಿಯಿಂದ ಅಧಿಕೃತ ಪ್ರಕಟಣೆ ನೀಡಲಾಗಿದ್ದು ಎಲ್ಲರೂ ಸೂಚನೆ ಪಾಲಿಸಬೇಕು"

ಸಿ.ಗಿರೀಶ್, ನಗರಸಭೆ ಅಧ್ಯಕ್ಷ.

*ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಗರ ನಿವಾಸಿಗಳು ನಿತ್ಯ ಕಲುಷಿತ ನೀರು ಬಳಕೆ ಮಾಡುವಂತಾಗಿದೆ.ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಮುಂದಾಗದಿದ್ದರೆ ಸಂಘಟನೆಯ ಕಾರ್ಯಕರ್ತರೊಂದಿಗೆ ನಗರಸಭೆ ಕಚೇರಿ ಎದುರು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ"

ವಿನೋದ್ ಕುಟ್ಟಿ, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ.