ಜಿಲ್ಲೆ

ಜಲಶಕ್ತಿ ಅಭಿಯಾನ ಕಾಮಗಾರಿ ಚುರುಕು

ಕೋಲಾರ: ಜಿಲ್ಲೆಯಲ್ಲಿ ಕರೊನಾ ಮತ್ತು ಲಾಕ್‌ಡೌನ್ ಕಾರಣದಿಂದ ಹಿನ್ನಡೆ ಅನುಭವಿಸಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಶಕ್ತಿ ಅಭಿಯಾನದಡಿ ವಿವಿಧ ಕಾಮಗಾರಿಗಳು ಮತ್ತೆ ಚುರುಕುಗೊಳ್ಳುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲ ಸಂರಕ್ಷಣೆ, ಅಂತರ್ಜಲ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಕೃಷಿ ಚಟುವಟಿಕೆಗೆ ಅಗತ್ಯ ಪ್ರಮಾಣದಲ್ಲಿ ನೀರು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ಆರಂಭಿಸಿತ್ತು. ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಜತೆಗೆ ಗ್ರಾಮೀಣ ಆರ್ಥಿಕತೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ಕೂಡ ಜಲಶಕ್ತಿ ಅಭಿಯಾನದ ಉದ್ದೇಶಗಳಲ್ಲಿ ಒಂದು.

ಅಂತರ್ಜಲಮಟ್ಟ ತೀವ್ರ ಕುಸಿತ ಕಂಡು ಕುಡಿಯುವ ನೀರಿಗೆ ಕೊಳವೆ ಬಾವಿಗಳೇ ಆಧಾರವಾಗಿರುವ ಕೋಲಾರದಂತಹ ಜಿಲ್ಲೆಗಳಲ್ಲಿ ಜಲಶಕ್ತಿ ಯೋಜನೆ ಬಳಸಿಕೊಂಡಷ್ಟು ವರದಾನವಾಗಿ ಪರಿಣಮಿಸಲಿದೆ. ಯೋಜನೆ ಅನುಷ್ಠಾನಕ್ಕೆ ನರೇಗಾ ಯೋಜನೆಯನ್ನು ಬಳಸಿಕೊಂಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಅನುದಾನದ ಕೊರತೆ ಉಂಟಾಗುವುದಿಲ್ಲ.

ಜಿಲ್ಲೆಯ ಆರು ತಾಲೂಕು ವ್ಯಾಪ್ತಿಗಳ 154 ಗ್ರಾಪಂಗಳಲ್ಲಿ ಅಭಿಯಾನದಡಿ ಪ್ರಮುಖವಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತಲಾ 50 ಬದು ನಿರ್ಮಾಣ, 50 ಸೋಕ್‌ಪಿಟ್ ನಿರ್ಮಾಣ, 5 ರಾಜಕಾಲುವೆ ದುರಸ್ತಿ, 1 ಕೆರೆಹೂಳು ಎತ್ತುವುದು, 2 ಕಲ್ಯಾಣಿ, 5 ಗೋಕುಂಟೆ, 2 ಕೃಷಿಹೊಂಡ, 1 ಚೆಕ್‌ಡ್ಯಾಂ ನಿರ್ಮಾಣ, 5 ಮಳೆ ಕೊಯ್ಲು ಕಾಮಗಾರಿ, 10 ಕೃಷಿಹೊಂಡ, 5 ಕಿಚನ್ ಗಾರ್ಡನ್, 5 ರಸ್ತೆಗಳ ಬದಿ ಸಸಿ ನೆಡುವುದು, 5 ನೆಡುತೋಪು ಸೇರಿ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 2021-21ನೇ ಸಾಲಿನಲ್ಲಿ ಕೋಲಾರದಲ್ಲಿ 788 ಕಾಮಗಾರಿ, ಬಂಗಾರಪೇಟೆ 738, ಕೆಜಿಎಫ್ 407, ಮಾಲೂರು 583, ಮುಳಬಾಗಿಲು 1877 ಹಾಗೂ ಶ್ರೀನಿವಾಸಪುರದಲ್ಲಿ 557 ಸೇರಿ 4950 ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.

ಕರೊನಾದಿಂದ ಹಿನ್ನಡೆ: ಕರೊನಾ ಎರಡನೇ ಅಲೆ ಆರಂಭವಾದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರೂ ಆರಂಭದಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಅನುಮತಿ ನೀಡಿತ್ತಾದರೂ ಮತ್ತೆ ಕೆಲ ದಿನ ನಿರ್ಬಂಧ ವಿಧಿಸಿದ್ದು ಒಂದೆಡೆಯಾದರೆ ಕೂಲಿಕಾರು ಕರೊನಾ ಆತಂಕದಿಂದಾಗಿ ಕೆಲಸಕ್ಕೆ ಬರದಿದ್ದರಿಂದ ಯೋಜನೆ ಅನುಷ್ಠಾನದಲ್ಲಿ ಹಿನ್ನಡೆಯಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜೂನ್ ತಿಂಗಳ ಮೊದಲ ವಾರಕ್ಕೆ ಅನ್ವಯಿಸುವಂತೆ 1950 ಕಾಮಗಾರಿ ಪ್ರಗತಿಯಲ್ಲಿತ್ತು. ಕರೊನಾ ಅನ್‌ಲಾಕ್ 2.0 ನಂತರ ಬಹುತೇಕ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ಪ್ರಗತಿಯಲ್ಲಿದೆ.

ಮಾನವ ದಿನಗಳು: ಪ್ರಸಕ್ತ ಸಾಲಿನಲ್ಲಿ ನರೇಗಾದಡಿ ಜಿಲ್ಲೆಯಲ್ಲಿ 45 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಿದ್ದು, ಜೂನ್ ಮೊದಲ ವಾರಕ್ಕೆ ಅನ್ವಯಿಸುವಂತೆ 8.18 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.

ಕರೊನಾ ಲಾಕ್‌ಡೌನ್ ಕಾರಣದಿಂದ ಮೇ ತಿಂಗಳಲ್ಲಿ ಜಲಶಕ್ತಿ ಅಭಿಯಾನದ ಕಾಮಗಾರಿಗಳಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಪ್ರಸ್ತುತ ಕರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕೆ.ಪಿ. ಸಂಜೀವಪ್ಪ, ಉಪಕಾರ್ಯದರ್ಶಿ, ಜಿಪಂ, ಕೋಲಾರ