ಕೆ.ಆರ್.ಸಾಗರ: ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ಪ್ರಾಯೋಗಿಕವಾಗಿ ಜಲ ವಿಮಾನ ಪ್ರವಾಸೋದ್ಯಮ ನ.10 ರಂದು ನಡೆಯುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಸ್ಥಳ ಪರಿಶೀಲನೆ ನಡೆಸಿದರಲ್ಲದೆ, ವಿವಿಧ ಇಲಾಖೆ ಅಧಿಕಾರಿಗಳಿಗೆ ಸಿದ್ಧತೆ ಕುರಿತು ಸಲಹೆ-ಸೂಚನೆ ನೀಡಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ನ. 10ರಂದು 19 ಪ್ರವಾಸಿಗರು ಇರುವ ಜಲವಿಮಾನ ಕೆ.ಆರ್.ಸಾಗರ ಅಣೆಕಟ್ಟೆಯ ಕಾವೇರಿ ನದಿ ಹಿನ್ನೀರಿನಲ್ಲಿ ಇಳಿಯಲಿದೆ. ಈ ಕಾರಣದಿಂದ ಜಿಲ್ಲಾಧಿಕಾರಿ ಕುಮಾರ್ ಹೊಸಕನ್ನಂಬಾಡಿ ಗ್ರಾಮದ ಬಳಿಯ ಹಿನ್ನೀರಿನಲ್ಲಿರುವ ವೇಣುಗೋಪಾಲ ದೇವಾಲಯದ ಪಕ್ಕದಲ್ಲಿ ಜಲವಿಮಾನ ಇಳಿಯುವ ಸ್ಥಳ ಹಾಗೂ ತಾಂತ್ರಿಕ ಅವಶ್ಯಕತೆಗಳ ಬಗ್ಗೆ ಪರಿಶೀಲನೆ ನಡೆಸಿ ಕಾವೇರಿ ನೀರಾವರಿ ನಿಗಮ ಇಇ ಜಯಂತ್ ಅವರಿಂದ ಮಾಹಿತಿ ಸಂಗ್ರಹಿಸಿದರು.
ನಂತರ ಕಾರ್ಯಕ್ರಮ ಸ್ಥಳದ ಸ್ವಚ್ಛತೆ, ರಸ್ತೆ ಅಭಿವೃದ್ಧಿ, ಭದ್ರತೆ ಕುರಿತು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಅಗ್ನಿಶಾಮಕ ಸಿಬ್ಬಂದಿ ಯಾವುದೇ ಸಂದರ್ಭವನ್ನಾದರೂ ಎದುರಿಸಲು ಸಿದ್ಧರಿರಬೇಕು ಎಂದು ತಿಳಿಸಿದರು.
ಜಲವಿಮಾನ ಸಾರಿಗೆ ಇಲಾಖೆ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸ್ಥಳೀಯ ಪ್ರವಾಸೋದ್ಯಮ ಉತ್ತೇಜಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಲ ವಿಮಾನ ಪ್ರದರ್ಶನ ಇಲ್ಲಿ ನಡೆಸುತ್ತಿದ್ದು, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಕೆ.ರಘುರಾಮ್, ಮಂಡ್ಯ ಪೊಲೀಸ್ ವರಿಷಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ ಸಿಇಒ ಷೇಕ್ ಆಸಿಘ್ ತನ್ವಿರ್, ಕೆ.ಅರ್.ಸಾಗರ ಇಇ ಜಯಂತರ, ಎಇಇ ಕಿಶೋರ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆ, ಆರ್‌ಡಿಪಿಆರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.