ತುಮಕೂರು:ಲೋಕಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಂತೆ ರಾಜಕೀಯ ರಂಗ ಪ್ರವೇಶಿಸಿದೆ, ಇಲ್ಲವಾದರೆ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿರುತ್ತಿದ್ದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಹಳೆಯ ನನೆಪು ಮೆಲುಕು ಹಾಕಿದರು. ನಗರದ ಕನ್ನಡ ಭವನದಲ್ಲಿ ಭಾನುವಾರ ಆಟೋ ಚಾಲಕರು ಮತ್ತು ಇತರ ಅಸಂಘಟಿತ ಕಾರ್ಮಿಕರ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ನಾನು, ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದು ಐದು ಬಾರಿ ಲೋಕಸಭಾ ಸದಸ್ಯರಾಗಿ, 50 ವರ್ಷ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಉಳಿಯಲು ತುಮಕೂರು ಕ್ಷೇತ್ರದ ಜನ ನೀಡಿದ ಸಹಕಾರ ಮರೆಯಲಾರೆ ಎಂದರು.
ಪದವಿ ಶಿಕ್ಷಣ ಮುಗಿಸಿದ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ನನ್ನನ್ನು ಕರೆಸಿಕೊಂಡು ಕೋರಾದ ಶಾಲೆಯಲ್ಲಿ ಶಿಕ್ಷಕ ಹುದ್ದೆ ಖಾಲಿ ಇದೆ, ಕೆಲಸಕ್ಕೆ ಸೇರಿಕೊ ಎಂದರು. ಏನು ಮಾಡುವುದೆಂದು ತಿಳಿಯದೆ ಎಸ್.ಮಲ್ಲಿಕಾರ್ಜುನಯ್ಯ ಅವರ ಆಫೀಸಿಗೆ ಹೋಗಿ ಶ್ರೀಗಳು ನೀಡಿದ್ದ ಶಿಕ್ಷಕ ಹುದ್ದೆಯ ಆದೇಶ ಪತ್ರ ತೋರಿಸಿದೆ. ಶಿಕ್ಷಕ ಕೆಲಸ ಮಾಡಲು ನಿನಗಿಂಥ ಬುದ್ಧಿವಂತರಿದ್ದಾರೆ! ನೀನು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಕೋ ಎಂದು ಹೇಳಿದರು ಎಂದು ಬಸವರಾಜು ಸ್ಮರಿಸಿದರು.
ಆಗಿನ ಪ್ರಭಾವಿ ರಾಜಕೀಯ ನಾಯಕ ಕೆಂಪಹೊನ್ನಯ್ಯ ನನ್ನ ರಾಜಕೀಯ ಗುರುಗಳು. ಆಗ ನಾನು ಎಪಿಎಂಸಿ ಸದಸ್ಯನಾಗಿದ್ದೆ. ನನ್ನನ್ನು ಕರೆಸಿಕೊಂಡ ಕೆಂಪಹೊನ್ನಯ್ಯ ಎಪಿಎಂಸಿ ಅಧ್ಯಕ್ಷನಾಗು ಎಂದರು. ಅದರಂತೆ ಎರಡು ಅವಧಿಗೆ ಎಪಿಎಂಸಿ ಅಧ್ಯಕ್ಷನಾಗುವ ಅವಕಾಶ ಸಿಕ್ಕಿತು ಎಂದರು. ಬಿಜೆಪಿ ಮುಖಂಡ ಎಸ್.ಶಿವಪ್ರಸಾದ್ ಮಾತನಾಡಿ, ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿದ್ದು ಜನರ ಸೇವೆ ಮಾಡಿ, ಈಗ ವಿಶ್ರಾಂತಿಯಲ್ಲಿರುವ ಜಿ.ಎಸ್.ಬಸವರಾಜು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್.ಪರಮೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಶಿವಕುಮಾರ್, ಬಸವೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್, ಮುಖಂಡರಾದ ಸತ್ಯಮಂಗಲ ಜಗದೀಶ್, ನಿಸರ್ಗ ರಮೇಶ್, ವಿಶ್ವನಾಥ್ ಅಪ್ಪಾಜಪ್ಪ, ಪ್ರಕಾಶ್ ಭಾರಧ್ವಜ್, ಪ್ರೇಮಕುಮಾರ್, ಬಂಬೂ ಮೋಹನ್ ಮತ್ತಿತರರು ಇದ್ದರು.
ಕರೆದು ಟಿಕೆಟ್ ಕೊಟ್ಟಿದ್ದು ರಾಜೀವ್ಗಾಂಧಿ!:ಎಪಿಎಂಸಿ ಅಧ್ಯಕ್ಷನಾದ ಬಳಿಕ ತಾಲೂಕು ಬೋರ್ಡ್ ಸದಸ್ಯನಾಗಿದ್ದೆ, ಇಪ್ಪತ್ತೊಂದೂವರೆ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಭಾರತದ ಇತಿಹಾಸದಲ್ಲೇ ಯಾರೊಬ್ಬರೂ ಇಷ್ಟು ಅವಧಿವರೆಗೆ ಅಧ್ಯಕ್ಷರಾಗಿರಲಿಲ್ಲ. ಆ ಸಂದರ್ಭದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರ ಸಂಪರ್ಕ ದೊರೆಯಿತು. ಒಮ್ಮೆ ರಾಜೀವ್ ಗಾಂಧಿ ಕರೆದು, ತುಮಕೂರು ಕ್ಷೇತ್ರಕ್ಕೆ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಇಂದಿರಾಗಾಂಧಿ ನಿಮ್ಮ ಹೆಸರು ಬರೆದಿದ್ದಾರೆ. ನೀವು ಸ್ಪರ್ಧೆ ಮಾಡಿ ಎಂದು ಅವಕಾಶ ಮಾಡಿಕೊಟ್ಟರು. ಆಗ ಕೆ.ಲಕ್ಕಪ್ಪ ಹಾಲಿ ಸಂಸದರಾಗಿದ್ದರು. 1984ರ ಡಿಸೆಂಬರ್ 26ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದೆ ಎಂದು ಜಿ.ಎಸ್.ಬಸವರಾಜು ನೆನಪಿಸಿಕೊಂಡರು.