ಜಿಲ್ಲೆ

ಜಲಮಂಡಳಿ ಅಧಿಕಾರಿಗಳು ಚನ್ನಪಟ್ಟಣಕ್ಕೆ ಸೀಮಿತ: ರಾಮನಗರ ನಗರಸಭೆ ಸದಸ್ಯರ ಆಕ್ರೋಶ

Ramanagara

ರಾಮನಗರ:  ಜಲಮಂಡಳಿ ಅಧಿಕಾರಿಗಳು ಚನ್ನಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದು, ರಾಮನಗರವನ್ನು ಮರೆತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ನಡೆಯಿತು.

ನಗರಸಭೆಯ ಪ್ರಶಸ್ತಿ ಭವನದಲ್ಲಿ ಕುಡಿಯುವ ನೀರು ಸಂಬಂಧ ಗುರುವಾರ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಸದಸ್ಯ ಸೋಮಶೇಖರ್, ಜಲಮಂಡಳಿ ಎಇಇ ಗಂಗಾಧರ್ ತಮ್ಮ ಕಾರ್ಯವ್ಯಾಪ್ತಿಯನ್ನು ಚನ್ನಪಟ್ಟಣಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ರಾಮನಗರಕ್ಕೆ ಅಪರೂಪದ ಅತಿಥಿ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಇತರ ಸದಸ್ಯರು ಪಕ್ಷಾತೀತವಾಗಿ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನೀರಿನ ಟ್ಯಾಂಕ್ ಸ್ವಚ್ಛಗೊಳಿಸದಿರುವುದು, ವಿದ್ಯುತ್ ಕಡಿತಗೊಂಡಿರುವ ಸಮಯದಲ್ಲಿ ನೀರು ಬಿಡುವುದು ಅಥವಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ನೀರು ಬಿಡುತ್ತಿದ್ದಾರೆ. ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. 4 ಮತ್ತು 5ನೇ ವಾರ್ಡ್‌ನಲ್ಲಿ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಪ್ರತಿದಿನ ಕೂಲಿ ಮಾಡಿ ಜೀವನ ನಡೆಸುವಂತಹ ಜನರಿದ್ದು, ಈ ವಾರ್ಡ್‌ನಲ್ಲಿ ಯಾವಾಗ ಬೇಕು ಆಗ ನೀರು ಬಿಡುತ್ತಿದ್ದಾರೆ. ಇದರಿಂದ ಇಲ್ಲಿಯ ಬಡವರಿಗೆ ತೊಂದರೆಯಾಗುತ್ತಿದೆ ಪ್ರತಿದಿನ ಬೆಳಗ್ಗೆ 5 ಗಂಟೆಗೆ ನೀರು ಬಿಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆಲವು ಅಧಿಕಾರಿಗಳೇ ಮುಂದೆ ನಿಂತು ನಗರದಲ್ಲಿ ಅನಧಿಕತ ಕೊಳಾಯಿ ಮತ್ತು ಯುಜಿಡಿ ಸಂಪರ್ಕಗಳನ್ನು ಕೊಡಿಸುತ್ತಿದ್ದಾರೆ. ಇದರಿಂದ ನಗರಸಭೆಗೆ ಆದಾಯ ನಷ್ಟವಾಗುತ್ತಿದೆ. ಜತೆಗೆ ನಿಯಮಿತವಾಗಿ ಕಂದಾಯ ಪಾವತಿಸುವ ಜನರಿಗೂ ತೊಂದರೆ ಅಗುತ್ತಿದೆ ಎಂದು ಸದಸ್ಯರು ದೂರಿದರು.

ಪೈಪ್ ಒಡೆದು ನೀರು ಪೋಲು:  ನಗರದಾದ್ಯಂತ ಕುಡಿಯುವ ನೀರಿನ ಪೈಪ್ ಒಡೆದು ನೀರು ಚರಂಡಿ ಸೇರುತ್ತಿದೆ. ಪ್ರತಿ ಬೀದಿಯಲ್ಲಿ 8ರಿಂದ 10 ಕಡೆ ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿದೆ. ಅಧಿಕಾರಿಗಳಿಗೆ ಕುಡಿಯುವ ನೀರಿನ ಪೈಪ್ ಸರಿಪಡಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರು. ರೈಲ್ವೆ ಅಂಡರ್ ಪಾಸ್ ಬಳಿ ನಲ್ಲಿ ಪೈಪ್ ಒಡೆದು ಹೋಗಿ ನೀರು ಸೇತುವೆ ಕೆಳಗೆ ಸಂಗ್ರಹವಾಗುತ್ತಿದೆ. ಇದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪೈಪ್ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಗ್ಯಾಬ್ರಿಯಲ್ ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿದರು.

ನಮ್ಮ ಕೊಳವೆ ಬಾವಿಯನ್ನು ಬಳಸಿ : 23ನೇ ವಾರ್ಡ್‌ನ ಸದಸ್ಯ ರೋಜ್ ಪಾಷಾ ಮಾತನಾಡಿ, ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದೆ. ಈ ಭಾಗದಲ್ಲಿ 11 ದಿನಗಳಿಗೊಮ್ಮೆ ಕಾವೇರಿ ನೀರು ಸರಬರಾಜಾಗುತ್ತಿದೆ. ಕೊಳವೆ ಬಾವಿಗಳಿಲ್ಲ. ಆದ್ದರಿಂದ ನಮ್ಮ ಕೊಳವೆ ಬಾವಿಯನ್ನು ನಗರಸಭೆ ವಶಕ್ಕೆ ನೀಡುತ್ತೇವೆ. ಇದನ್ನು ಬಳಸಿಕೊಂಡು ವಾರ್ಡ್‌ಗೆ ನೀರು ಸರಬರಾಜು ಮಾಡಿ ಎಂದರೂ ಅಧಿಕಾರಿಗಳು ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಎಷ್ಟು ವರ್ಷಗಳು ಕಳೆದಿವೆ. ಕಳೆದ 40 ವರ್ಷದಲ್ಲಿ ಒಮ್ಮೆಯೂ ಜಿಲ್ಲಾಸ್ಪತ್ರೆಯ ಪಕ್ಕದ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿಲ್ಲ. ಪಾಚಿ ಕಟ್ಟಿಕೊಂಡಿದೆ. ಜನತೆಗೆ ಜಲಮಂಡಳಿ ಗಲೀಜು ನೀರು ಪೂರೈಸುತ್ತಿದೆ. ಜನರ ಆರೋಗ್ಯ ಏನಾಗಬೇಕು ಎಂದು ಪ್ರಶ್ನಿಸಿದರು.