ಜಿಲ್ಲೆ

ಜಲದಡಿಯ ಲೋಕ ಅದ್ಭುತ

ಭಟ್ಕಳ: ಭೂಮಿಯ ಮೇಲೆ ಒಂದು ಲೋಕವಿದ್ದರೆ ಜಲದ ಅಡಿಯಲ್ಲೂ ಇನ್ನೊಂದು ಲೋಕವಿದೆ. ಕಣ್ಣು ಕುಕ್ಕುವ, ಮನಸೂರೆಗೊಳ್ಳುವ ಜಲಚರಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಇಂತಹ ಪ್ರಪಂಚ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿರುವುದು ನಮ್ಮ ಸೌಭಾಗ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಹೇಳಿದರು.

ಭಟ್ಕಳ ತಾಲೂಕಿನ ಮುರ್ಡೆಶ್ವರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ‘ಸ್ಕೂಬಾ ಡೈವಿಂಗ್’ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಡಮಾನ್ ಬಿಟ್ಟರೆ ದೇಶದ ಕೌತುಕ ಇರುವುದು ನಮ್ಮ ಜಿಲ್ಲೆಯಲ್ಲಿ. ಲಕ್ಷಾಂತರ ವ್ಯಯಿಸಿ ಅಲ್ಲಿ ಹೋಗುವುದಕ್ಕಿಂತ ಇಲ್ಲೆ ಸ್ಕೂಬಾ ಡೈವ್​ನ ಅನುಭವ ಪಡೆಯಬಹುದು. ಮುರ್ಡೆಶ್ವರದ ಸ್ಕೂಬಾ ಡೈವ್ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿದ್ದು ನುರಿತ ಡೈವರ್ಸ್​ಗಳು ಡೈವ್ ಮಾಡಲು ಸಮುದ್ರದಾಳದಲ್ಲಿ ಕರೆದೊಯ್ಯುತ್ತಾರೆ. ಪ್ರಚಾರದ ಕೊರತೆಯಿಂದ ಇದು ಅಷ್ಟೊಂದು ಪ್ರಾಮುಖ್ಯತೆ ಪಡೆದಿಲ್ಲ. ಹಾಗಾಗಿ ಇಂತಹ ಉತ್ಸವಗಳನ್ನು ಏರ್ಪಡಿಸುವ ಮೂಲಕ ಪ್ರವಾಸಿಗರಿಗೆ ಇದರ ಮಾಹಿತಿ ನೀಡಲಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ, ಪ್ರಪಂಚದಲ್ಲಿ ಕೆಲವೆಡೆ ಮಾತ್ರ ಲಭ್ಯವಿರುವ ಸ್ಕೂಬಾ ಡೈವಿಂಗ್ ಮುರ್ಡೆಶ್ವರದಲ್ಲೂ ಇದೆ ಎಂಬುದು ಕೆಲವು ವರ್ಷದ ಹಿಂದೆ ನೇಪಾಳ ಪ್ರವಾಸಕ್ಕೆ ಹೋದಾಗ ನನಗೆ ತಿಳಿಯಿತು. ನಿರೀಕ್ಷಿತ ಮಟ್ಟದಲ್ಲಿ ಸ್ಕೂಬಾ ಡೈವಿಂಗ್ ಯಶಸ್ಸು ಕಾಣದಿರಲು ಪ್ರಚಾರದ ಕೊರತೆಯೇ ಕಾರಣವಾಗಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳ ಜನರಿಗೆ ಇದರ ಬಗ್ಗೆ ತಿಳಿಸುವ ಕೆಲಸವಾಗಬೇಕು ಎಂದರು. ಭಟ್ಕಳ ಉಪವಿಭಾಗಾಧಿಕಾರಿ ಸಾಜೀದ್ ಮುಲ್ಲಾ, ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ಕಾರವಾರ ಡಿಎಫ್​ಒ ವಸಂತ ರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸಭಾ ಕಾರ್ಯಕ್ರಮದ ನಂತರ ಮೂರು ದೋಣಿಗಳಲ್ಲಿ 50ಕ್ಕೂ ಹೆಚ್ಚು ಮಂದಿ ನೇತ್ರಾಣಿ ಗುಡ್ಡಕ್ಕೆ ಪ್ರಯಾಣ ಬೆಳೆಸಿದರು. ಕುಮಟಾದ 12ರ ಋತು ಶ್ರೀಧರ ಕುಮಟಾಕರ ಸತತ ಒಂದು ಗಂಟೆ ಸ್ಕೂಬಾ ಡೈವ್ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.