ಔರಾದ್: ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಜಲಜೀವನ್ ಮಿಷನ್ ದೇಶಾದ್ಯಂತ ಆರಂಭಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದು, ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಸೂಚಿಸಿದರು.
ಔರಾದ್, ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ೯.೫ ಕೋಟಿ ರೂ. ಮೊತ್ತದ ಜಲಜೀವನ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಉತ್ತಮ ಯೋಜನೆ ಇದಾಗಿದೆ ಎಂದರು.
ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಅವಶ್ಯಕ. ಕೆಲಸದ ಬಗ್ಗೆ ಜನರು ನಿಗಾ ವಹಿಸಬೇಕು. ಲೋಪ ಕಾಣಿಸಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕಾಮಗಾರಿ ತೃಪ್ತಿಕರ ಇಲ್ಲವಾದರೆ ವಶಕ್ಕೆ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ತಾಪಂ ಇಒ ಶಿವಕುಮಾರ ಘಾಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಡಿ.ಸುಭಾಷ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರವೀಣ ಕಾರಬಾರಿ, ಬಾಳಾಸಾಹೇಬ್ ಪಾಟೀಲ್, ಭರತ್ ಕದಮ್, ಶಿವಕುಮಾರ ಜುಲ್ಫೆ, ಬಾಲಾಜಿ ತೇಲಂಗ್, ರವಿ ಬಿರಾದಾರ, ಶಕುಂತಲಾ ಮುತ್ತಂಗೆ, ಹಣಮಂತ ದಾನಾ, ದೇವದಾಸ ಪವಾರ್, ಯೋಗೇಶ ಪಾಟೀಲ್, ಸಚಿನ್ ರಾಠೋಡ್, ಬಾಬು ಗುರೂಜಿ, ಸಂಜುಕುಮಾರ ಮುರ್ಕೆ, ಉದಯ ಸೋಲಪುರೆ ಇತರರಿದ್ದರು.