ಜಿಲ್ಲೆ

ಜಲಗ್ರಾಮವಾದ ಜಲ್ಲಿಗೇರಿ ತಾಂಡಾ

ಶಿರಹಟ್ಟಿ: ತಾಲೂಕಿನ ಜಲ್ಲಿಗೇರಿ ಗ್ರಾಮದ ಊರ ಜನರೆಲ್ಲ ಮಂಗಳವಾರ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ್ದರು. ಕೆಲವೇ ಕ್ಷಣಗಳಲ್ಲಿ ದಿಗಮೆಯಿಂದ ಎದ್ದು ಕುಳಿತು ಕೂಗಾಡತೊಡಗಿದರು. ನೋಡ ನೋಡುತ್ತಲೇ ಮನೆತುಂಬಾ ನೀರು ತುಂಬಿ ದವಸ-ಧಾನ್ಯ, ಬಟ್ಟೆ-ಬರೆ ಹಾಗೂ ಇತರೆ ವಸ್ತುಗಳು ನೀರಲ್ಲಿ ತೇಲುವಂತಾದವು. ಇಡೀ ರಾತ್ರಿ ಜಾಗರಣೆ ಮಾಡಿ ಮನೆಯೊಳಗಿನ ನೀರೆಲ್ಲ ಹೊರ ಹಾಕುವುದರಲ್ಲಿ ಮನೆಮಂದಿಯೆಲ್ಲ ಸುಸ್ತಾದರು.

ಸುಮಾರು ಮೂರು ಗಂಟೆ ಧಾರಾಕಾರವಾಗಿ ಸುರಿದ ಮಳೆಯಿಂದ ಉಂಟಾದ ಸನ್ನಿವೇಶವಿದು. ಹಲವಾರು ವರ್ಷಗಳಿಂದಲೂ ಭಾರಿ ಮಳೆಯಾದಾಗಲೆಲ್ಲ ಇದೇ ಪರಿಸ್ಥಿತಿ ಉಂಟಾಗುತ್ತಿದ್ದರೂ ಸಂಬಂಧಪಟ್ಟ ಯಾರೊಬ್ಬರೂ ಶಾಶ್ವತ ಪರಿಹಾರಕ್ಕೆ ಯತ್ನಿಸಿಲ್ಲ.

ಸಮಸ್ಯೆಗೇನು ಕಾರಣ?: 2003ರಲ್ಲಿ ಗ್ರಾಮ ಪಂಚಾಯಿತಿಯು ಊರ ಹೊರವಲಯದಲ್ಲಿ ನಿವೇಶನಗಳನ್ನು ನೀಡಿದ್ದರಿಂದ ಸುಮಾರು 60 ಬಡ ಕುಟುಂಬಗಳು ಮಣ್ಣಿನ ಮನೆಗಳನ್ನು ಕಟ್ಟಿಕೊಂಡು ವಾಸವಾಗಿವೆ. ಮನೆಗಳ ಪಕ್ಕದಲ್ಲಿ ರಸ್ತೆಯೊಂದು ಬಿಟ್ಟರೆ ಚರಂಡಿಯಾಗಲಿ ಇತರ ಮೂಲ ಸೌಕರ್ಯವಾಗಲಿ ಕಲ್ಪಿಸಿಲ್ಲ. ಮನೆಗಳ ಪಕ್ಕದಲ್ಲಿ ಪೂಜಾರ ಅವರ ಜಮೀನಿದ್ದು, ಮಳೆ ನೀರು ಹೊಲದೊಳಗೆ ಬಾರದಂತೆ ಅವರು ಬದುವು ನಿರ್ವಿುಸಿದ್ದಾರೆ. ಹೀಗಾಗಿ, ಭಾರಿ ಮಳೆಯಾದಾಗ ಪಕ್ಕದಲ್ಲೇ ಇರುವ ಗುಡ್ಡದಿಂದ ಹರಿದು ಬರುವ ನೀರು ಪೂಜಾರ ಅವರ ಹೊಲದೊಳಗೆ ಹರಿಯದೇ ನೇರವಾಗಿ ರಸ್ತೆ ಮಾರ್ಗವಾಗಿ ತಗ್ಗು ಪ್ರದೇಶದಲ್ಲಿರುವ ಮನೆಯೊಳಗೆ ನುಗ್ಗುತ್ತದೆ. ಇದರಿಂದಾಗಿ ಜನ, ಜಾನುವಾರು ತೊಂದರೆ ಅನುಭವಿಸಬೇಕಾಗಿದೆ.

ಅಧಿಕಾರಿಗಳ ತಂಡ ಭೇಟಿ: ಭಾರಿ ಮಳೆಗೆ ಗ್ರಾಮ ಜಲಾವೃತವಾಗಿರುವುದರಿಂದ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಪಂ. ಇಒ ಡಾ. ಎನ್.ಎಚ್. ಓಲೇಕಾರ, ಪಿಡಿಒ ಕಪ್ಪಲಿ ಅವರು ಪರಿಶೀಲನೆ ನಡೆಸಿದರು. ತಕ್ಷಣವೇ ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕವಾಗಿ ಕಾಲುವೆ ನಿರ್ವಿುಸಿ ನೀರು ಹಳ್ಳಕ್ಕೆ ಹರಿದು ಹೋಗುವಂತೆ ಮಾಡಿದರು. ನಂತರ ಮಾತನಾಡಿದ ಅವರು, ‘ಹೊಲದ ಮಾಲೀಕ ಪೂಜಾರ ಅವರೊಂದಿಗೆ ರ್ಚಚಿಸಿ ಅಗತ್ಯ ಪರಿಹಾರ ನೀಡಿ ಅವರ ಹೊಲದಲ್ಲಿ ಕಾಲುವೆ ನಿರ್ವಿುಸಲು ಜಾಗ ಪಡೆಯಲಾಗುತ್ತದೆ. ಈ ಮೂಲಕ ನೀರು ಸರಾಗವಾಗಿ ಹಳ್ಳಕ್ಕೆ ಹೋಗಲು ಶಾಶ್ವತ ಪರಿಹಾರ ಕಲ್ಪಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಬಿಸಿಯೂಟದ ವ್ಯವಸ್ಥೆ: ಮನೆಗಳಿಗೆ ನೀರು ನುಗ್ಗಿದ್ದರಿಂದ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿವಾಸಿಗಳ ನೆರವಿಗೆ ಬಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಓಲೇಕಾರ ಅವರು, ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲು ಮುಂದಾದರು. ಆದರೆ, ಕೆಲವರು ಒಪ್ಪದ ಕಾರಣ ಶಾಲೆಯಲ್ಲೇ ತಯಾರಿಸಲಾದ ಬಿಸಿಯೂಟವನ್ನು ಮನೆ-ಮನೆಗೆ ತೆರಳಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ನಂತರ ಮನೆಗಳಿಗೆ ಊಟ ತಲುಪಿಸುವ ವ್ಯವಸ್ಥೆ ಮಾಡಲಾಯಿತು.