ಕಿಕ್ಕೇರಿ: ನೀರಿಗಾಗಿ ದೊಡ್ಡ ಯುದ್ಧ ನಡೆಯುವ ಸಂದಿಗ್ಧತೆ ಬರುವ ಮುನ್ನ ಎಚ್ಚೆತ್ತುಕೊಂಡು ಜಲನಿರ್ವಹಣೆಗೆ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.
ಹೋಬಳಿಯ ಸಾಸಲು ಗ್ರಾಮದಲ್ಲಿ ಧರ್ಮಸ್ಥಳ ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಲ ಜಾಗೃತಿಗಾಗಿ ಬೀದಿನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿಯೇ ಬಲು ದೊಡ್ಡ ಜನಸಂಖ್ಯೆ ಹೊಂದಿರುವ ದೇಶ ನಮ್ಮದಾಗಿದೆ. ಪ್ರಾಕೃತಿಕ ಸಂಪತ್ತುಗಳಲ್ಲಿ ಒಂದಾದ ನೀರು ಚಿನ್ನಕ್ಕೆ ಸಮನಾಗಿದೆ. ಪಂಚಭೂತಗಳಲ್ಲಿ ಒಂದಾದ ನೀರನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಜಲಕ್ಷಾಮವಾಗಲಿದೆ. ಹೀಗಾಗಿ ಜನತೆ ಎಚ್ಚೆತ್ತುಕೊಂಡು ಜಲ ಸಂರಕ್ಷಣೆಗೆ ಮುಂದಾಗಬೇಕು. ಇಂಗುಗುಂಡಿ ಯೋಜನೆಯನ್ನು ಪ್ರತಿ ಮನೆಗಳಲ್ಲಿ ನಿರ್ಮಿಸಿಕೊಳ್ಳಲು ಮುಂದಾಗಬೇಕು. ಕೆರೆಕಟ್ಟೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಸ್ನೇಹಜೀವಿ ಕಲಾತಂಡದಿಂದ ಜಲ ಜಾಗೃತಿ ಬೀದಿನಾಟಕ ನಡೆಯಿತು. ಶುದ್ಧ ನೀರು ಆರೋಗ್ಯಕ್ಕೆ ಮದ್ದು. ಮಲಿನ ನೀರಿನಿಂದ ವಿವಿಧ ರೋಗ ಹರಡುವಿಕೆ ಕುರಿತು ಪ್ರದರ್ಶನ ನೀಡಿ ಜಾಗೃತಿ ಮೂಡಿಸಿದರು.
ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ವಲಯ ಮೇಲ್ವಿಚಾರಕಿ ಕಾಂತಿಕಾಮಣಿ, ಸಮನ್ವಯಾಧಿಕಾರಿ ಮಾದಲಾಂಬಿಕಾ, ಗ್ರಾಪಂ ಸದಸ್ಯೆ ಭಾಗ್ಯಮ್ಮ, ಒಕ್ಕೂಟ ಅಧ್ಯಕ್ಷೆ ತಾಯಮ್ಮ, ಸೇವಾ ಪ್ರತಿನಿಧಿ ಪ್ರೇಮಾ, ಲತಾ, ಸ್ನೇಹಜೀವಿ ಕಲಾತಂಡದ ನಾಗರಾಜು ಮತ್ತಿತರರಿದ್ದರು.