ಜಿಲ್ಲೆ

3 ಸಾವಿರ ಕೊಳವೆ ಬಾವಿ ಸರದಾರ 3ನೇ ತರಗತಿ ವಿದ್ಯಾರ್ಥಿ

ಶಶಿಧರ ಕುಲಕರ್ಣಿ ಮುಂಡಗೋಡ

ಅಂಗನವಾಡಿಗೆ ಹೋಗುತ್ತಿದ್ದ ಬಾಲಕನೊಬ್ಬ ತಂದೆಗೇ ಸವಾಲು ಹಾಕಿ ಕೊಳವೆ ಬಾವಿ ತೆಗೆಸಲು ಪಾಯಿಂಟ್ ಹುಡುಕಿ ಕೊಟ್ಟ. ಆ ಬಾಲಕ ಹುಡುಕಿಕೊಟ್ಟ ಕೊಳವೆ ಬಾಯಿ ಪಾಯಿಂಟ್ ಯಶಸ್ವಿಯಾಗಿ ಸುಮಾರು 4 ಇಂಚು ನೀರು ಬಿದ್ದು ಆಶ್ಚರ್ಯ ತಂದಿದ್ದು ಎಲ್ಲರೂ ಹುಬ್ಬೇರಿಸುವಂತಾಗಿದೆ.

ಆ ಬಾಲಕ ಬೇರೆ ಯಾರೂ ಅಲ್ಲ…ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಈಗ ಮೂರನೇ ತರಗತಿ ಓದುತ್ತಿರುವ ವಿಶ್ವಾಸ ಆಲದಕಟ್ಟಿ. ಹೆಸರಿಗೆ ತಕ್ಕ ಹಾಗೆಯೇ ರೈತರು ಈತನನ್ನು ಅತಿ ವಿಶ್ವಾಸದಿಂದಲೇ ತಮ್ಮ ಹೊಲಗಳಿಗೆ ಕೊಳವೆ ಬಾವಿ ತೆಗೆಸುವ ಸಲುವಾಗಿ ಪಾಯಿಂಟ್ ಕಂಡು ಹಿಡಿಯಲು ಕರೆದುಕೊಂಡು ಹೋಗುತ್ತಾರೆ. ಪುಟ್ಟ ಬಾಲಕ ಈಗ ಕೊಳವೆ ಬಾವಿಯ ಸರದಾರನಾಗಿದ್ದಾನೆ.

ತಂದೆ ಸಂತೋಷ , ತಾಯಿ ವಿಜಯಲಕ್ಷ್ಮೀ. 2016ರಲ್ಲಿ ಇವರು ತಮ್ಮ ಹೊಲದಲ್ಲಿ ತೆಗೆಸಿದ ಸುಮಾರು 18 ಕೊಳವೆ ಬಾವಿಗಳು ವಿಫಲವಾಗಿದ್ದವು. ಇದರಿಂದ ಬೇಸತ್ತ ಅವರು ಕೊಳವೆ ಬಾವಿಯ ಸುದ್ದಿಯನ್ನೇ ಬಿಟ್ಟಿದ್ದರು.

ಕೈಯಲ್ಲಿ ತೆಂಗಿನಕಾಯಿ ಇದ್ದರೆ ಸಾಕು: ವಿಶ್ವಾಸ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಹೊಲದಲ್ಲಿ ಹೊರಟರೆ ಸಾಕು ಇದೇ ಜಾಗದಲ್ಲಿ ಜಲವಿದೆ. ಇಲ್ಲಿಯೇ ಬೋರು ಹೊಡೆಸಿ ಎಂದು ರೈತರಿಗೆ ಹೇಳುತ್ತಾನೆ. ಆ ಜಾಗದಲ್ಲಿ ಬೋರು ತೆಗೆಸಲು ಗುರುತು ಮಾಡಿ ಕೊಡುತ್ತಾನೆ. ಕೇವಲ ತೆಂಗಿನಕಾಯಿ ಮೂಲಕ ಕಳೆದ ಮೂರು ವರ್ಷಗಳಿಂದ ಸುಮಾರು 3 ಸಾವಿರ ಕೊಳವೆ ಬಾವಿಗಳಿಗೆ ಪಾಯಿಂಟ್​ಗಳನ್ನು ಕಂಡು ಹಿಡಿದಿದ್ದು, ಯಾವೊಂದು ಕೊಳವೆ ಬಾವಿಯೂ ವಿಫಲವಾಗಿಲ್ಲ.

ಬೇರೆ ತಾಲೂಕುಗಳಲ್ಲಿ ಕಾಯಕ: ಮುಂಡಗೋಡ ತಾಲೂಕು ಹೊರತುಪಡಿಸಿ ಬೇರೆ ತಾಲೂಕುಗಳಿಗೂ ವಿಶ್ವಾಸನನ್ನು ಪಾಯಿಂಟ್ ಕಂಡು ಹಿಡಿಯಲು ಕರೆದುಕೊಂಡು ಹೋಗುತ್ತಾರೆ. ಹಾವೇರಿ, ರಾಣೆಬೆನ್ನೂರ, ದಾವಣಗೇರಿ, ಶಿಗ್ಗಾಂವ, ಶಿವಮೊಗ್ಗ, ಧಾರವಾಡ ಮುಂತಾದ ಕಡೆ ಈತನನ್ನು ಕರೆದೊಯ್ಯುತ್ತಾರೆ. ಇದಲ್ಲದೆ ಬೇರೆ ರಾಜ್ಯಗಳಿಂದಲೂ ಈತನಿಗೆ ಪಾಯಿಂಟ್ ಕಂಡು ಹಿಡಿಯಲು ಕರೆಗಳು ಬಂದಿವೆ. ಆದರೆ, ತಂದೆ-ತಾಯಿ ಕಳಿಸಲು ಒಪ್ಪುತ್ತಿಲ್ಲ.

ತಾಲೂಕಿನ ಜನರಿಗೆ ಪಾಯಿಂಟ್ ಕಂಡು ಹಿಡಿಯುವ ವಿಶ್ವಾಸ ಅಚ್ಚು-ಮೆಚ್ಚಿನ ಬಾಲಕ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಈತನಿಗೆ ಶೌರ್ಯ ಪ್ರಶಸ್ತಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ನಮ್ಮ ಹೊಲದಲ್ಲಿ ಬೇರೆಯವರ ಕಡೆಯಿಂದ ಪಾಯಿಂಟ್ ಹಿಡಿದು ಕೊಳವೆ ಬಾಯಿ ತೆಗೆಸಿದ್ದಾಗ ನೀರು ಬಿದ್ದಿರಲಿಲ್ಲ. ವಿಶ್ವಾಸ ರಾತ್ರಿ ಒಂದು ಗಂಟೆಗೆ ಬಂದು ನಮ್ಮ ಹೊಲದಲ್ಲಿ ಪಾಯಿಂಟ್ ಕಂಡು ಹಿಡಿದು ಕೊಟ್ಟು ಹೋದ. ನಂತರ ಕೊಳವೆ ಬಾವಿ ತೆಗೆಸಿದೆವು. ಸುಮಾರು 5 ಇಂಚು ನೀರು ಬಿದ್ದಿದೆ. ನಮಗೆ ಸಂತಸವಾಗಿದೆ. | ನಾಗರಾಜ ಅಂದಲಗಿ ಚಿಗಳ್ಳಿ ರೈತ