ವಿಜಯವಾಣಿ ಸುದ್ದಿಜಾಲ ಧಾರವಾಡ
ಅಮೂಲ್ಯ ವಸ್ತುವಾಗಿರುವ ನೀರಿಲ್ಲದೆ ಜೀವ ಇಲ್ಲ. ವಿಶ್ವದಲ್ಲಿ ಶೇ.71ರಷ್ಟು ನೀರು ಬಳಕೆಗೆ ಯೋಗ್ಯವಾಗಿಲ್ಲ. ನೈಸರ್ಗಿಕ ಸಂಪನ್ಮೂಲವಾದ ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ಸಂಸ್ಥೆ ಆವರಣದಲ್ಲಿ 2 ದಿನಗಳ ಕಾಲ ಏರ್ಪಡಿಸಿರುವ ಜಲ ನಿರ್ವಹಣೆ ಮತ್ತು ಹವಾಮಾನ ಬದಲಾವಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟು 66.66 ಲಕ್ಷ ಹೆಕ್ಟೇರ್‌ನಷ್ಟು ಭೂಮಿ ನೀರಾವರಿಗೆ ಲಭ್ಯ ಇದೆ. ಆದರೆ ನಾವು 44 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನೀರಾವರಿ ಮಾಡುತ್ತಿದ್ದೇವೆ. 10.6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಆಗಲು ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಪರಿಹರಿಸುವ ಕಾರ್ಯ ನಡೆದಿದೆ. ಇವೆಲ್ಲದರ ಜತೆಗೆ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ನೀರಾವರಿಗೆ ವ್ಯವಸ್ಥೆ ಮಾಡುವುದು ನಮ್ಮ ಗುರಿ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಆಹಾರ ಇಲ್ಲದೆ ಉಪವಾಸ ಇರಬಹುದು. ನೀರಿಲ್ಲದೆ ಬದುಕಲು ಅಸಾಧ್ಯ. ಮನುಷ್ಯನಿಗೆ ಅಗತ್ಯವಿದ್ದಂತೆ ಭೂಮಿಗೂ ನೀರು ಮುಖ್ಯ. ಕೃಷಿಯಲ್ಲಿ ಸರಿಯಾಗಿ ನೀರಿನ ಬಳಕೆ ಮಾಡುವುದರ ಮೂಲಕ ಭೂಮಿ ಫಲವತ್ತತೆ ಕಾಪಾಡಬೇಕಲ್ಲದೆ, ನೀರಿನ ಸದ್ಬಳಕೆಯೂ ಆಗಬೇಕು ಎಂದರು.
ನೆಲ, ಜಲ ಬಗ್ಗೆ ವಾಲ್ಮಿ ಸಂಸ್ಥೆ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಬರೀ ಕೆಲಸ ಮಾಡಿದರೆ ಸಾಲದು ನೀರಿನ ಬಳಕೆ, ಭೂಮಿ ಫಲವತ್ತತೆ ಬಗ್ಗೆ ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಇದರಿಂದ ರೈತರು ಉತ್ತಮ ಬೆಳೆ ಬೆಳೆದು ಉತ್ತಮ ಆದಾಯ ಹೊಂದಲು ಸಹಕಾರಿ ಆಗಲಿದೆ. ಇದರಿಂದ ಇಂತಹ ಸಮ್ಮೇಳನಗಳನ್ನು ನಡೆಸಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.
ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಆಸ್ಟ್ರೇಲಿಯಾದ ಡಾ. ಕಾರ್ಲಿನ್ ಮೇವಾಲ್ಡ್, ಈಜಿಪ್ಟ್‌ನ ಡಾ. ಮೊಹಮದ್ ಆ್ಯಬ್ಡೆಲ್‌ಆ್ಯಟಿ, ಜಲ ತಜ್ಞ ಡಾ. ರಾಜೇಂದ್ರ ಸಿಂಗ್, ಅಕ್ಕಮಹಾದೇವಿ ವಿವಿ ಕುಲಪತಿ ಡಾ. ಬಿ.ಕೆ. ತುಳಸಿಮಾಲಾ, ಡಾ. ಅಶೋಕ ದಳವಾಯಿ, ಭೀಮಸೇನ ಕೋಕರೆ, ಸದಾಶಿವಗೌಡ ಪಾಟೀಲ, ಬೇಲೂರ ಗ್ರಾಪಂ ಅಧ್ಯಕ್ಷೆ ವೈಶಾಲಿ ಹುಲ್ಲಂಬಿ, ಲಕ್ಷ್ಮಣ ಚನ್ನಣ್ಣವರ, ವಿವಿಧ ವಿಷಯಗಳ ತಜ್ಞರು, ಇತರರು ಇದ್ದರು.
ಕೃಷ್ಣಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಧಾರವಾಡ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಹಾದಿಮನಿ ವಂದಿಸಿದರು.