ಹಾಸನ: ಕನ್ನಡ ನಾಡಿನಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಹಾಸನ ಕನ್ನಡ ಸಾಹಿತ್ಯ ಘಟಕ ಸಂಪೂರ್ಣ ಸಹಕಾರ ನೀಡುತ್ತಿದೆ. ಪರಿಷತ್ತಿನ ಧ್ಯೇಯಗಳಲ್ಲಿ ಈ ನಾಡಿನ ಜಲ ರಕ್ಷಣೆಯೂ ಸೇರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ ಅವರು ಹೇಳಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಂದು ರಾಜ್ಯದ ಜನರಿಗೆ ಜಲ ಸಂಕಟ ಎದುರಾಗಿದೆ. ನಾವು ಇಂದು ಬೆಳೆಗಳಿಗೆ ನೀರು ಕೇಳುತ್ತಿಲ್ಲ. ಜನ- ಜಾನುವಾರು ಕುಡಿಯಲು ನೀರು ಕೇಳುತ್ತಿದ್ದೇವೆ. ಇವರು ನೀಡಿರುವ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ ಇರುವ ನೀರಿನಲ್ಲಿ ಶೇ.50ರಷ್ಟು ನೀರು ಯಾವ ಬಳಕೆಗೂ ಬರುವುದಿಲ್ಲ. ಇನ್ನುಳಿದ ನೀರಿನಲ್ಲಿ ಮೂರ್ನಾಲ್ಕು ತಿಂಗಳು ಕುಡಿಯಲು ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ನಾವು ಯಾವ ಆದೇಶ ಪಾಲಿಸಲು ಸಾಧ್ಯ. ಸುಪ್ರೀಂಕೋರ್ಟ್ ತೀರ್ಪಿಗೆ ನಾವು ಗೌರವ ನೀಡುತ್ತೇವೆ. ಆದರೆ, ಪಾಲಿಸಲು ಆಗದಂತಹ ತೀರ್ಪು ನೀಡಿದರೆ ಅದನ್ನು ಪಾಲಿಸುವುದು ಹೇಗೆ? ನೀರಿನಲ್ಲದೆ ಸಾಯುವ ಬದಲು, ತೀರ್ಪುನ್ನು ವಿರೋಧಿಸಿ ಜೈಲಿನಲ್ಲಿ ಸಾಯುವ ನಿರ್ಣಯವನ್ನು ಕನ್ನಡಿಗರು ಮಾಡಿದ್ದಾರೆ. ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಕನ್ನಡಿಗರು ಹೋರಾಟ ಮಾಡುತ್ತಿದ್ದಾರೆ. ಇಲ್ಲಿನ ಜನರ ಸಂಕಷ್ಟ ಏನು? ವಸ್ತುಸ್ಥಿತಿ ಏನು ಎಂಬುದನ್ನು ನ್ಯಾಯಮೂರ್ತಿಗಳೇ ಬಂದು ಪರಿಶೀಲಿಸಿ ಆನಂತರ ತೀರ್ಪು ನೀಡಲಿ ಎಂದು ಹೇಳಿದರು.