ಬಳ್ಳಾರಿ : ಇಲ್ಲಿನ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ ಹಾಗೂ ಮಹಿಳೆಯ ಆಕೃತಿಗಳ ಪ್ರತಿರೂಪಗಳನ್ನು ಪ್ರದರ್ಶನಕ್ಕಿರಿಸಲಾಗಿದೆ ಎಂದು ಡಿಸಿ ಪ್ರಶಾಂತ್ ಕುಮಾರ ಮಿಶ್ರಾ ತಿಳಿಸಿದ್ದಾರೆ.
ಸಿಂಹ ಮುಖದ ಮನುಷ್ಯ ಸ್ಟಾಡೆಲ್ಜಿಲ್ ಊರಿನ ಒಂದು ಗುಹೆಯಲ್ಲಿ ಸಿಕ್ಕಿದೆ. ಇದು ಸುಮಾರು 40,000 ವರ್ಷದ ಹಿಂದಿನದೆಂದು ಅಂದಾಜಿಸಲಾಗಿದೆ. ವೀನಸ್ (ಮಾತೃದೇವತೆ) ಡಾಲ್ನಿ ವೇಸ್ಟೊನೈಸ್ ಎಂಬ ಪ್ರದೇಶದಲ್ಲಿ ಸುಮಾರು 31,000 ವರ್ಷಗಳ ಹಿಂದೆ ದೊರೆತಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ದೊರೆತ ಹದಿನೈದು ಮಾನವನ ತಲೆಬುರುಡೆಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಸಂಗ್ರಹವನ್ನು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಇಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಏಳು ಜನ ದೇಶ ಹಾಗೂ ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.