ಚಿತ್ರದುರ್ಗ: ಚೀನಾದ ಆಕ್ರಮಣ ಎದುರಿಸಲು ಚಿನ್ನದ ಕಿರೀಟ, ಉಂಗುರಗಳು, ಸಹಸ್ರಾರು ರೂ. ನಗದನ್ನು ಭಾರತ ಸರ್ಕಾರಕ್ಕೆ ಅರ್ಪಿಸಿದ್ದ ಕೀರ್ತಿ ಲಿಂಗೈಕ್ಯ ಶ್ರೀ ಜಯವಿಭವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಅವರ ಈ ನಡೆ ದೇಶಾಭಿಮಾನಕ್ಕೆ ಮಾದರಿಯಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ನಗರದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಜಯವಿಭವ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಜಯದೇವ ಸ್ವಾಮೀಜಿ ಅವರ ಉತ್ತರಾಧಿಕಾರಿಗಳಾಗಿದ್ದ ಜಯವಿಭವ ಸ್ವಾಮೀಜಿ ವೇದ, ವೇದಾಂತ, ಸಕಲ ಶಾಸ್ತ್ರ ಅಭ್ಯಾಸ ಮಾಡಿದ್ದವರು ಎಂದರು.
ಸಂಯಮಶೀಲರು, ಮಿತಭಾಷಿಗಳಾಗಿದ್ದರು. ಬೂಟಾಟಿಕೆ ಇರಲಿಲ್ಲ. ಷಟ್‌ಸ್ಥಲ ಸಿದ್ಧಾಂತವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾದ 6 ಭಾಷೆಗಳಲ್ಲಿ ಪಾಂಡಿತ್ಯವಿತ್ತು ಎಂದು ಹೇಳಿದರು.
ಶ್ರೀಗಳು ಪರಿಸರ ಪ್ರೇಮಿಗಳಾಗಿದ್ದರು. ಹೂವಿನ ತೋಟ, ಮಠದ ಪಕ್ಕ ಕಲ್ಪವೃಕ್ಷ ವನ ನಿರ್ಮಿಸಿದ್ದರು. ಧರ್ಮ, ಸಮಾಜವನ್ನು ಹೇಗೆ ಕೊಂಡೊಯ್ಯಬೇಕೆಂದು ಚಿಂತಿಸುತ್ತಿದ್ದರು. 18ನೇ ಜಗದ್ಗುರುಗಳಾಗಿದ್ದ ಜಯವಿಭವ ಸ್ವಾಮೀಜಿ ಅವರು ಅಲ್ಪಕಾಲ ಶ್ರೀಮಠದ ಆಡಳಿತ ನೋಡಿಕೊಂಡರೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸಗಳನ್ನು ಮಾಡಿದ್ದಾರೆ. ಕೃಷಿ ಪ್ರೇಮವೂ ಅವರಲ್ಲಿತ್ತು. ಶಾಂತವೀರ ಮುರುಗಿ ಸ್ವಾಮೀಜಿ ಅವರಿಂದ ಇಲ್ಲಿಯವರೆಗೆ ಅನೇಕ ಜಗದ್ಗುರುಗಳು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಹೆಸರಾಗಿದ್ದಾರೆ ಎಂದರು.
ಶ್ರೀಮಠ, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರು ಜಯವಿಭವ ಸ್ವಾಮೀಜಿ ನಿರ್ಮಾಣ ಮಾಡಿದ್ದ ತೋಟದ ಅಭಿವೃದ್ಧಿಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.
ಜಯವಿಭವ ಶ್ರೀಗಳು ಹಾಗೂ ಮಲ್ಲಿಕಾರ್ಜುನ ಜಗದ್ಗುರುಗಳ ಆಶೀರ್ವಚನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಬೇಕಿದೆ. ಜಯವಿಭವ ಸ್ವಾಮೀಜಿ ಅವರು ನಗರದಲ್ಲಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ನಿರ್ಮಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ಕಟ್ಟಿಸಿದ್ದರು. ಅಕ್ಕಮಹಾದೇವಿ ಸಮಾಜಕ್ಕೆ ಜಾಗ ನೀಡಿ ಕಟ್ಟಡ ನಿರ್ಮಿಸಲು ಧನಸಹಾಯ ಒದಗಿಸಿದ್ದರು. ಹೊಳಲ್ಕೆರೆ ರಸ್ತೆಯ ವೀರಶೈವ ಸಮಾಜದ ವಾಣಿಜ್ಯ ಸಂಕೀರ್ಣವನ್ನು ಶ್ರೀಗಳು ಉದ್ಘಾಟಿಸಿದ್ದರು. ಇಂತಹ ಹಲವು ಸಮಾಜಮುಖಿ ಕಾರ್ಯಕ್ಕೆ ಕಾರಣರಾಗಿದ್ದರು ಎಂದರು.
ಶ್ರೀ ಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀಗಳ ಸ್ಮರಣೆ ಅಂಗವಾಗಿ ಮುಂಜಾನೆ ಕರ್ತೃ ಗದ್ದುಗೆಯಲ್ಲಿ ವಚನಾಭಿಷೇಕ ನಡೆಯಿತು. ನಂತರ ಶ್ರೀ ಜಗದ್ಗುರು ಜಯವಿಭವ ಸ್ವಾಮೀಜಿ ಕಲ್ಪವೃಕ್ಷ ವನದ ಮಹಾದ್ವಾರವನ್ನು ಜಯದೇವ ವಿದ್ಯಾರ್ಥಿ ನಿಲಯದ ಮಾಜಿ ವ್ಯವಸ್ಥಾಪಕ ಎಸ್.ಮಲ್ಲಯ್ಯ ಉದ್ಘಾಟಿಸಿದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಶರಣೆ ಅಕ್ಕನಾಗಮ್ಮ ತಾಯಿ, ಸುರೇಶ್‌ಬಾಬು, ಕೆಇಬಿ ಷಣ್ಮುಖಪ್ಪ, ಎಸ್.ಪರಮೇಶ್, ಗುತ್ತಿನಾಡು ಪ್ರಕಾಶ್, ಕೆ.ಎಂ.ವೀರೇಶ್ ಮತ್ತಿತರರು ಇದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಹಂತೇಶ ನಿಟುವಳ್ಳಿ ಸ್ವಾಗತಿಸಿದರು. ನಂದೀಶ ನಿರೂಪಿಸಿದರು. ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಡಾ.ಬಸವಕುಮಾರ ಸ್ವಾಮೀಜಿ, ಡಾ.ಬಸವಪ್ರಭು ಸ್ವಾಮೀಜಿ ಹಾಲು-ಹಣ್ಣು ಮತ್ತು ಸಿಹಿ ವಿತರಿಸಿದರು.
*ಕೋಟ್
ದೀರ್ಘಕಾಲದ ಜೀವನಕ್ಕಿಂತ ದಿವ್ಯವಾದ ಜೀವನಕ್ಕೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಜಯವಿಭವ ಶ್ರೀಗಳು ನಿಸ್ವಾರ್ಥ ಸೇವಾ ಹಾದಿ ಉತ್ತಮ ಉದಾಹರಣೆಯಾಗಿದೆ.
ಶ್ರೀ ಬಸವಪ್ರಭು ಸ್ವಾಮೀಜಿ