ಜಿಲ್ಲೆ

ಜಯಲಕ್ಷ್ಮೀ ವಿಲಾಸ ನವೀಕರಣ ಕಾರ್ಯ ಬಿರುಸು

ಮೈಸೂರು: ನಗರದ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆ ಸಂರಕ್ಷಣಾ ಕಾರ್ಯ ಭರದಿಂದ ಸಾಗಿದೆ. 2025ರ ಹೊತ್ತಿಗೆ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸಂರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಿರುವ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಆಫ್ ಇಂಡಿಯಾ ಮತ್ತು ಯುಎಸ್ ಕನ್ಸಲೇಟ್‌ನ ಪ್ರತಿನಿಧಿಗಳು ನೀಡಿ ನವೀಕರಣ ಕಾಮಗಾರಿ ಪರಿಶೀಲಿಸಿದರು.

ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಜಯಲಕ್ಷ್ಮೀವಿಲಾಸ ಅರಮನೆ, ಅಲ್ಲಿರುವ ಜಾನಪದ ವಸ್ತು ಸಂಗ್ರಹಾಲಯದ ಸಂರಕ್ಷಣಾ ಕೆಲಸವನ್ನು ವಹಿಸಿಕೊಂಡಿದೆ. ಈ ಕಟ್ಟಡದ ಪಶ್ಚಿಮ ಭಾಗಕ್ಕೆ ಯುಎಸ್ ಕನ್ಸಲೇಟ್ 2.4 ಕೋಟಿ ರೂ. ಅನುದಾನ ನೀಡಿದೆ.

ಯುಎಸ್ ಕನ್ಸಲೇಟ್ ದೇಶದಲ್ಲಿ 11 ಸಾವಿರ ಸಂರಕ್ಷಣಾ ಕಾಮಗಾರಿ ವಹಿಸಿ ಕೊಂಡಿದ್ದು, 2.7 ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡುತ್ತಿದೆ ಎಂದು ಪಬ್ಲಿಕ್ ಡಿಪ್ಲಮಸಿ ಅಫೈರ್ನ್ ರಾಯಭಾರಿ ಜಿಯಾನ್ ಬ್ರಿಗಾಂಟಿ ತಿಳಿಸಿದರು.

ಭಾರತದಲ್ಲಿ ನಮ್ಮ ಸಂಸ್ಥೆಯು 23 ಯೋಜನೆ ಕೈಗೊಂಡಿದ್ದು, ಇದು 2ನೇ ದೊಡ್ಡ ಯೋಜನೆಯಾಗಿದೆ. ಜಯಲಕ್ಷ್ಮೀ ವಿಲಾಸ ಅರಮನೆಯ ಪಶ್ಚಿಮ ಭಾಗದಲ್ಲಿ ಸುಮಾರು ಶೇ.60ರಷ್ಟು ಸಂರಕ್ಷಣಾ ಕಾರ್ಯ ಪೂರ್ಣವಾಗಿದೆ. ಕಟ್ಟಡದ ಮೂಲ ಮಾದರಿಯಂತೆಯೇ ಸಂರಕ್ಷಣಾ ಕೆಲಸವನ್ನು ನಡೆಸಲಾಗುತ್ತಿದೆ.

ಕೆಲಸದಲ್ಲಿ ಜಾಗತಿಕ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಸ್ನೇಹ, ಸೌಹಾರ್ದ ಇನ್ನಷ್ಟು ಗಟ್ಟಿಕೊಳಿಸುವಲ್ಲಿ ಇಂತಹ ಯೋಜನೆಗಳು ಸಹಕಾರಿಯಾಗಲಿದೆ. ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಪ್ರೋತ್ಸಾಸ ಸಿಗಲಿದೆ ಎಂದರು.

ಜಾನಪದ ವಸ್ತು ಸಂಗ್ರಹಾಲಯದಲ್ಲಿರುವ ಸಾವಿರಾರು ವಸ್ತುಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ಕಟ್ಟಡದ ಲ್ಛಾವಣಿ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಈಗಾಗಲೇ ಸಂರಕ್ಷಣೆ ಹೊಣೆ ಹೊತ್ತಿರುವ ಡೆಕ್ಕನ್ ಹೆರಿಟೇಜ್ ಬೆಂಗಳೂರಿನ ಯುಟಿಸಿ, ಮೈಸೂರಿನ ಓರಿಯಂಟಲ್ ಕಟ್ಟಡದ ಸಂರಕ್ಷಣೆ ಕಾರ್ಯ ಮಾಡಿದೆ ಎಂದು ತಿಳಿಸಿದರು.

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜ್ ಮಾತನಾಡಿ, ಸಂರಕ್ಷಣಾ ಕಾರ್ಯದ ಸಮಯದಲ್ಲಿ ಪರಿಣಿತ ಕೆಲಸಗಾರರ ಸಮಸ್ಯೆ ಎದುರಾಗಿದೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಮೈಸೂರು ವಿವಿಯು ಇವರಿಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ.

mysore

ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ. ಪಾರಪಂರಿಕ ವಸ್ತುಗಳು ಮತ್ತು ಕಟ್ಟಡಗಳ ಕುರಿತು ಎರಡೂ ರಾಷ್ಟ್ರಗಳ ಯುವಕರಲ್ಲಿ ಅರಿವು ಮೂಡಿಸಲು, ಪರಂಪರೆ ತಿಳಿಸಲು ಇದು ಸಹಕಾರಿ ಎಂದರು.

ಈ ಜಾನಪದ ವಸ್ತು ಸಂಗ್ರಹಾಲಯಕ್ಕೆ ಸಾರ್ವಜನಿಕರು ಮತ್ತು ಲೇಖಕರ ಕೊಡುಗೆ ಅಪಾರ. ನಾಡಿನ ಹಿರಿಯ ಲೇಖಕರ ಅನೇಕ ವಸ್ತುಗಳನ್ನು ತಾವೇ ಖುದ್ದಾಗಿ ಮತ್ತು ಉಚಿತವಾಗಿ ಸಂರಕ್ಷಣೆಗಾಗಿ ತಂದು ನೀಡಿದ್ದಾರೆ. ನಾವೂ ಕೂಡ ಅನೇಕ ವಸ್ತುಗಳನ್ನು ಸಂಗ್ರಹಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಜಯಲಕ್ಷ್ಮೀವಿಲಾಸದ ಮೇಲುಸ್ತುವಾರಿ ಡಾ.ಗುರುಸಿದ್ದಯ್ಯ. ಇಂಜಿನಿಯರ್ ಅಖಿಲಾ ಇನ್ನಿತರರಿದ್ದರು.