ಜಯಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳಿಂದಾಗಿ ಬಡ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ಗುರುವಾರ ಜಯಪುರದ ಅಲಗೇಶ್ವರ ರಸ್ತೆಯ ಬಡದಂಪತಿ ವೇಲಾಯುಧನ್ ಹಾಗೂ ರುಕ್ಮಿಣಿ ಅವರಿಗೆ ನಿರ್ಮಿಸಿದ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಬಡವರಿಗೆ ಸಾಲದ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ. ಸಂಸ್ಥೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 19 ವಾತ್ಸಲ್ಯ ಮನೆ, 3990 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮೂಲಕ ವಿದ್ಯಾರ್ಥಿ ವೇತನ, 882 ನಿರ್ಗತಿಕರಿಗೆ ಮಾಸಾಶನ, 72 ಮದ್ಯವ್ಯರ್ಜನ ಶಿಬಿರಗಳ ಮೂಲಕ 1421 ಜನರನ್ನು ಪಾನಮುಕ್ತರಾಗಿಸಿದ್ದು, 116 ದೇವಸ್ಥಾನಗಳಿಗೆ ಹಾಗೂ 62 ಡೇರಿ ನಿರ್ಮಾಣಕ್ಕೆ ಹಣದ ನೆರವು ಮತ್ತು ಜಿಲ್ಲೆಯ 78 ಗ್ರಾಮಗಳಲ್ಲಿ ಶುದ್ಧಗಂಗಾ ಘಟಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಸುರಕ್ಷಾ ಯೋಜನೆ ಮೂಲಕ ರೋಗಿಗಳ ಚಿಕಿತ್ಸೆಗೆ ಸಹಾಯ, ಜಲಮಂಗಲ ಕಾರ್ಯಕ್ರಮದ ಮೂಲಕ 732 ವಿಕಲಚೇತನರಿಗೆ ವ್ಹೀಲ್‌ಚೇರ್, ವಾಕಿಂಗ್‌ಸ್ಟಿಕ್‌ನಂತಹ ಉಪಕರಣಗಳನ್ನು ನೀಡಿದ್ದು, ಜ್ಞಾನದೀಪ ಕಾರ್ಯಕ್ರಮದಲ್ಲಿ 81 ಶಾಲೆಗಳಿಗೆ 81 ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.
ಶೃಂಗೇರಿ ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ ಮಾತನಾಡಿ, ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವೇಲಾಯುಧನ್ ಹಾಗೂ ರುಕ್ಮಿಣಿ ವೃದ್ಧ ದಂಪತಿಯ ಸಮಸ್ಯೆ ಕುರಿತ ವರದಿ ನೋಡಿ ಸ್ಪಂದಿಸಿದ್ದೇವೆ. ಪ್ರಾರಂಭದಲ್ಲಿ ಒಂದು ಸಾವಿರ ರೂ. ಮಾಸಾಶನ, ನಂತರ ಪಾತ್ರೆ, ಬಟ್ಟೆ ಹಾಗೂ ದಿನಬಳಕೆಯ ವಸ್ತುಗಳನ್ನೊಳಗೊಂಡ ವಾತ್ಸಲ್ಯ ಕಿಟ್ ವಿತರಿಸಿದ್ದು, ಈಗ ವಾತ್ಸಲ್ಯ ಮನೆ ನಿರ್ಮಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.
ಜಯಪುರ ಪಿಎಸಿಎಸ್ ಅಧ್ಯಕ್ಷ ಡಿ.ಬಿ.ರಾಜೇಂದ್ರ ಮಾತನಾಡಿ, ಡಾ. ವೀರೇಂದ್ರ ಹೆಗ್ಡೆ ಅವರ ಕನಸಿನ ಯೋಜನೆಯಿಂದಾಗಿ ಇಲ್ಲಿನ ಬಡ ದಂಪತಿಯ ಮನೆಯ ಕನಸು ನನಸಾಗಿದೆ ಎಂದರು.
ವಿಜಯವಾಣಿ ವರದಿಗಾರ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ವೃದ್ಧ ದಂಪತಿಯ ಮನೆ ಕುಸಿದಾಗ ಸಾಗುವಳಿ ಚೀಟಿ ಇದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ದುರುದ್ದೇಶದಿಂದ ಅನಧಿಕೃತ ಮನೆ ಎಂಬ ತಪ್ಪು ವರದಿ ನೀಡಿದ ಪರಿಣಾಮ ದಂಪತಿಗೆ ಮನೆ ಪರಿಹಾರದ ಐದು ಲಕ್ಷ ರೂ. ಸರ್ಕಾರದಿಂದ ಬರಲಿಲ್ಲ. ಹಾಗಾಗಿ ಐದು ವರ್ಷಗಳಿಂದ ಪಾಳುಬಿದ್ದ ಸರ್ಕಾರಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ವಿಜಯವಾಣಿಯ ವರದಿ ನೋಡಿ ಕಟುಂಬಕ್ಕೆ ನೆರವು ನೀಡಿರುವುದು ಅಭಿನಂದನೀಯ ಕಾರ್ಯ ಎಂದರು.
ವೃದ್ಧ ದಂಪತಿ ಸಂಬಂಧಿ ರೇಣುಕಾ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಯೋಜನೆಯ ಅಧಿಕಾರಿಗಳು ಮಾಡಿರುವುದು ಪ್ರಶಂಸನೀಯ ಎಂದರು.
ಗ್ರಾಪಂ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಜಯಾ ಮುರುಗೇಶ್, ಸದಸ್ಯ ಪಣಿರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿನಯ, ಮೇಲ್ವಿಚಾರಕ ಮನೋಹರ, ಸೇವಾಪ್ರತಿನಿಧಿ ವಿಮಲಾ ಇತರರಿದ್ದರು.