ಚಿತ್ರದುರ್ಗ: ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಅನೇಕ ಜನಹಿತ ಕಾರ್ಯಗಳಲ್ಲಿ ವಿದ್ಯಾಪ್ರಸಾರಕ್ಕೆ ಮಾಡಿದ್ದ ನೆರವು ಶ್ಲಾಘನೀಯವೆಂದು ಮುರುಘಾ ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.
ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ವಿದ್ಯಾರ್ಥಿನಿಲಯದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿಯೇ ರಾಜ್ಯ, ಹೊರ ರಾಜ್ಯಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಶ್ರೀಗಳು ಸದವಕಾಶ ಕಲ್ಪಿಸಿದ್ದರು.
ಸಮಾಜದಲ್ಲಿರುವ ಅಜ್ಞಾನ, ಅಂಧಕಾರ ಹೋಗಲಾಡಿಸಲು ವಿದ್ಯೆ ದಿವ್ಯೌಷಧ. ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇದೇ ಮೂಲಾಧಾರವೆಂದು ನಂಬಿದ್ದ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ದೂರದರ್ಶಿತ್ವದಿಂದಾಗಿ ಚಿತ್ರದುರ್ಗ, ಬೆಂಗಳೂರು, ತಿಪಟೂರು, ದಾವಣಗೆರೆ, ಧಾರವಾಡ, ಕೊಲ್ಲಾಪುರ, ಹಾವೇರಿ, ಅಥಣಿ, ಅರಸೀಕೆರೆ, ನಿಪ್ಪಾಣಿ, ಜಯದೇವ ವಾಡಿ(ಕಾಶಿ) ಹೀಗೆ ಪ್ರಮುಖ ನಗರ,ಪಟ್ಟಣಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಅಸಂಖ್ಯ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.
ವೀರಶೈವ ಲಿಂಗಾಯತ ಬಡಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯದ ಹಳೆಯ ಕಟ್ಟಡ ನವೀಕರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಜಯದೇವ ಜಗದ್ಗುರುಗಳ ಹುಟ್ಟೂರಾದ ಬಿನ್ನಾಳದಮನೆ ಜೀರ್ಣೋದ್ಧಾರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡರಾದ ಕೆಇಬಿ ಷಣ್ಮುಖಪ್ಪ, ವೀಣಾ ಸುರೇಶ್, ಸುರೇಶ್‌ಬಾಬು, ಕೆ.ಎಂ.ವೀರೇಶ್, ವೀರಶೈವ ಸಮಾಜದ ಕಾರ‌್ಯದರ್ಶಿ ಪಿ. ವೀರೇಂದ್ರಕುಮಾರ್, ಬಿ.ಎಸ್.ಮಂಜುನಾಥ್, ಡಿ.ಎಸ್.ಮಲ್ಲಿಕಾರ್ಜುನ್, ಷಡಾಕ್ಷರಯ್ಯ, ಚಳ್ಳಕೆರೆ ತಿಪ್ಪೇಸ್ವಾಮಿ, ನಾಗರಾಜ ಸಂಗಂ, ಎಚ್.ವಿ. ತಿಪ್ಪೇಸ್ವಾಮಿ, ಕೆ.ಸಿ.ಉಮಾಮಹೇಶ್ವರ, ಜಾಲಿಕಟ್ಟೆ ರುದ್ರಪ್ಪ, ವೀರೇಶ್, ಶಶಿಧರ್‌ಬಾಬು, ಕರಿಬಸವಯ್ಯ ಎಚ್.ಸಿ. ನಿರಂಜನಮೂರ್ತಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.