ಚಿತ್ರದುರ್ಗ: ಮೊಟ್ಟ ಮೊದಲ ಪ್ರಸಾದ ನಿಲಯಗಳ ಜನಕ ಮಹಾಲಿಂಗ ಶ್ರೀ. ಆ ಬೀಜವನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಜಯದೇವ ಶ್ರೀ ಅವರದ್ದಾಗಿದೆ. ಬರಗಾಲದ ವೇಳೆಯೂ ಮುರುಘಾಮಠದ ದವಸ-ಧಾನ್ಯಗಳಿಂದ ಗಂಜಿ ಮಾಡಿ ಜನರಿಗೆ ಹಂಚಿದ ಮಹಾನುಭಾವರು ಎಂದು ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಬಣ್ಣಿಸಿದರು.
ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಬುಧವಾರ ನಡೆದ ಶ್ರೀಗಳ ಜೀವನ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಶೂನ್ಯ ಪೀಠ-ಮುರುಘಾ ಪರಂಪರೆ ಒಂದೇ ಆಗಿದ್ದು, ಬೇರೆಯಲ್ಲ. ಸಮಾಜಮುಖಿ ಕಾರ್ಯಗಳಿಗೆ ಉದಾರವಾಗಿ ದಾನ ನೀಡಿದ ಹೆಗ್ಗಳಿಕೆ ಜಯದೇವ ಶ್ರೀಗಳದ್ದಾಗಿದೆ. ಅನೇಕ ದೂರುಗಳ ನಿವಾರಣೆ ಸಂಬಂಧ ಶ್ರೀಮಠ ನ್ಯಾಯಾಲಯವು ಕೂಡ ಆಗಿತ್ತು. ಮಠದ ಭೂಮಿಯನ್ನು ಲಿಂಗಾಯಿತರೆ ಸಾಗುವಳಿ ಮಾಡುತ್ತಿದುದ್ದನ್ನು ಗಮನಿಸಿ, ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಿದ ಪುಣ್ಯಾತ್ಮ ಎಂದು ಸ್ಮರಿಸಿದರು.
ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ ತೆಲಗಾವಿ ಮಾತನಾಡಿ, ಶಾಂತವೀರ ಶ್ರೀಗಳಿಂದ ಆರಂಭವಾದ ಮುರುಘಾ ಪರಂಪರೆ ಇಲ್ಲಿ ನೆಲಸದ್ದಿದ್ದರೆ, ಚಿತ್ರದುರ್ಗದ ಸಾಂಸ್ಕೃತಿಕ ಪರಂಪರೆ ನಾಡಿನಲ್ಲಿ ಮೇರು ಶಿಖರ ತಲುಪುತ್ತಿರಲಿಲ್ಲ ಎಂದರು.
ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ನೂರಾರು ವರ್ಷಗಳ ಹಿಂದೆಯೇ ಹೃದಯಾಘಾತಕ್ಕೆ ಒಳಗಾಗುವವರ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಜಯದೇವ ಹೃದ್ರೋಗಾಲಯ ತೆರೆಯಲು ಕಾರಣರಾದವರು ಜಯದೇವ ಶ್ರೀ. ದೂರ ದೃಷ್ಟಿಯುಳ್ಳ ಅವರು ಸದಾ ಆದರ್ಶಪ್ರಾಯರು. ನಾಡಿನಾದ್ಯಂತ ತಿರುಗಾಡಿ ಉತ್ತಮ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಿದರು. ಹೀಗಾಗಿ ಶ್ರೀಗಳ ಸಾಮಾಜಿಕ ಕಳಕಳಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗಾವಿ ಸಾಹಿತಿ ಪ್ರಕಾಶ್ ಗಿರಿಮಲ್ಲಣ್ಣನವರ್ ಮಾತನಾಡಿ, 1ಸಾವಿರ ಪುಟಗಳ ಬೃಹತ್ ಗ್ರಂಥವನ್ನು ಕೇವಲ ಒಂದು ತಿಂಗಳಲ್ಲಿ ಪ್ರಕಟಿಸಿರುವುದು ಮಹತ್ ಕಾರ್ಯವಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕ್‌ರಿಂದಲೇ ಜಯದೇವ ಶ್ರೀಗಳು ಪ್ರಶಂಸೆಗೆ ಒಳಗಾಗಿದ್ದರು. ಸಾಮಾಜಿಕ ಕಾರ್ಯಗಳಿಂದಲೇ ಮುರುಘಾಮಠ ಹೆಸರುವಾಸಿ ಎಂದು ತಿಳಿಸಿದರು.
ಇದೇ ವೇಳೆ ಸಾಹಿತಿಗಳಾದ ಮೃತ್ಯುಂಜಯ ರುಮಾಲೆ, ಡಾ.ಎಸ್.ಆರ್.ಗುಂಜಾಳ, ಕೆ.ಎಲ್.ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಡಾ.ಬಸವಕುಮಾರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಕೆಇಬಿ ಷಣ್ಮುಖಪ್ಪ ಇತರರಿದ್ದರು.