ಜಿಲ್ಲೆ

ಜಯದೇವ ಶ್ರೀಗಳ ತೇರು ಎಳೆಯುವುದೇ ಪುಣ್ಯ

ಚಿತ್ರದುರ್ಗ: ನಾಡಿಗೆ ಮುರುಘರಾಜೇಂದ್ರ ಬೃಹನ್ಮಠದ ಜಯದೇವ ಶ್ರೀಗಳ ಕೊಡುಗೆ ಅನನ್ಯ. ಹೀಗಾಗಿ ಅವರ ತೇರು ಎಳೆಯುವ ಭಾಗ್ಯ ದೊರೆತಿರುವುದು ಪುಣ್ಯ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಹೇಳಿದರು.

ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಅಂಗವಾಗಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜಯದೇವ ಕಪ್’ ಮಹಿಳಾ ಕ್ರೀಡಾಕೂಟದಲ್ಲಿ ಮಾತನಾಡಿದರು.

ಜಯದೇವ ಶ್ರೀ ಅವರು ಚಿತ್ರದುರ್ಗದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದರು. ಮೈಸೂರು ಸಂಸ್ಥಾನದಷ್ಟೇ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಸದಾ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.

ಹಿರಿತೆರೆ-ಕಿರುತೆರೆ ಕಲಾವಿದೆ ಅಶ್ವಿನಿಗೌಡ ಉದ್ಘಾಟಿಸಿ ಮಾತನಾಡಿ, ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂಬುದು ಸತ್ಯ. ಎಲ್ಲ ರಂಗದಲ್ಲೂ ಇರುವ ಸ್ತ್ರೀಯರು ಸಾಧನೆಯತ್ತ ದಾಪುಗಾಲಿಟ್ಟಿದ್ದಾರೆ. ಕ್ರೀಡಾಕ್ಷೇತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ ಎಂದರು.

ಬಸವಕಲ್ಯಾಣ ಬಸವ ಮಹಾಮನೆಯ ಶರಣೆ ಸತ್ಯಕ್ಕ ಮಾತನಾಡಿ, ಮಹಿಳೆಯರು ಆಸಕ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ. ಇದರಿಂದ ದೈಹಿಕ ಉಲ್ಲಾಸ, ಮನಸ್ಸಿಗೆ ಸಂತೋಷ ಸಿಗಲಿದೆ. ಆರೋಗ್ಯ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ವೀಣಾ ಸುರೇಶ್ ಬಾಬು ಮಾತನಾಡಿ, ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀಗಳ ಜಯಂತ್ಯುತ್ಸವ ಅಂಗವಾಗಿ ಕ್ರೀಡಾಕೂಟ ಆಯೋಜಿಸಿ ಮಹಿಳೆಯರಿಗೂ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಇದೇ ವೇಳೆ ಅಶ್ವಿನಿಗೌಡ, ಟೈಕ್ವಾಂಡೋ ಕ್ರೀಡಾಪಟು ಎಂ.ಅನಿತಾ ಅವರನ್ನು ಸನ್ಮಾನಿಸಲಾಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ನೇತೃತ್ವ ವಹಿಸಿದ್ದರು. ಶರಣೆಯರಾದ ನಂದಾ ಮಾತೆ, ಮುಕ್ತಾಯಕ್ಕ, ಜಯದೇವಿ, ಚಿನ್ಮಯಿ ಮಾತೆ, ನಗರಸಭೆ ಪೌರಾಯುಕ್ತೆ ಎಂ.ರೇಣುಕಮ್ಮ, ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷ ಆರ್.ಗಣೇಶ್, ಲತಾ ಉಮೇಶ್, ರುದ್ರಾಣಿ ಗಂಗಾಧರ್, ಮೋಕ್ಷಾ ರುದ್ರಸ್ವಾಮಿ ಇತರರಿದ್ದರು.