ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಹಾಗೂ ಜಗದ್ಗುರು ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಅಕ್ಟೋಬರ್ 1ರಿಂದ ಜಯದೇವ ಶ್ರೀ ಕ್ರೀಡಾಜಾತ್ರೆ ಏರ್ಪಡಿಸಲಾಗಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 1ರಿಂದ 4ರ ವರೆಗೆ ಜೆಎಂಐಟಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ವಿವಿಧ ಇಲಾಖೆಗಳ 10 ಸಹಿತ 25 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ವಿಜೇತ ತಂಡಗಳಿಗೆ ನಗದು ಬಹುಮಾನ, ಜಯದೇವ ಜಗದ್ಗುರು ಟ್ರೋಫಿ ಪ್ರಧಾನ ಮಾಡಲಾಗುವುದು ಎಂದರು.
ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಶ್ರೀರಾಮ್ ಮಾತನಾಡಿ, ಜಿಲ್ಲೆಯ ಸರ್ಕಾರಿ, ಖಾಸಗಿ ಶಾಲೆಗಳ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 5ರಿಂದ 7ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿವಿಧ ಪಂದ್ಯಾವಳಿ ನಡೆಯಲಿವೆ. ಕಬಡ್ಡಿ, ಹ್ಯಾಂಡ್‌ಬಾಲ್, ಖೋಖೋ ಮತ್ತಿತರ ಕ್ರೀಡೆಗಳಲ್ಲಿ 1400 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಊಟ, ವಸತಿ ವ್ಯವಸ್ಥೆಯೊಂದಿಗೆ ಜಿಲ್ಲೆಯ ವಿವಿಧೆಡೆಯಿಂದ ಬರುವಂಥ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ ನೀಡಲಾಗುವುದು. ಪ್ರಥಮ 8 ತಂಡಗಳಿಗೆ ತಲಾ 10 ಸಾವಿರ ರೂ. ನಗದು, ಟ್ರೋಫಿ, ಪದಕ ಹಾಗೂ ಪಂದ್ಯ ಶ್ರೇಷ್ಠ ಪುರಸ್ಕಾರ, ನಗದು 3 ಸಾವಿರ ರೂ. ಪ್ರದಾನ ಮಾಡಲಾಗುವುದು ಎಂದರು.
ಮಹಿಳಾ ಕ್ರೀಡಾಕೂಟ ಸಮಿತಿ ಅಧ್ಯಕ್ಷೆ ರುದ್ರಾಣಿ ಗಂಗಾಧರ್ ಮಾತನಾಡಿ, ಮಹಿಳೆಯರಿಗೆ ಅಕ್ಟೋಬರ್ 6ರಂದು ಕ್ರೀಡಾಕೂಟ ಏರ್ಪಡಿಸಲಾಗಿದೆ. ಹಗ್ಗ-ಜಗ್ಗಾಟ, ಮಡಕೆ ಒಡೆಯವುದು, ಲೆಮನ್ ಸ್ಫೂನ್, ಥ್ರೋಬಾಲ್, ಮ್ಯುಜಿಕಲ್ ಚೇರ್ ಆಟಗಳಿರುತ್ತವೆ. 25-50 ವರ್ಷ ಹಾಗೂ 50 ವರ್ಷ ವಯೋಮಿತಿ ಮಿರಿದ ವಿಭಾಗವಿರುತ್ತದೆ. ಈ ಎರಡೂ ವಿಭಾಗಳಿಗೂ ತಲಾ 3, 2 ಹಾಗೂ ಒಂದು ಸಾವಿರ ರೂ. ನಗದು ಬಹುಮಾನವಿರುತ್ತದೆ. ಶರಣರ ವೇಷಭೂಷಣ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ. ಹೆಸರು ನೋಂದಣಿಗೆ ಆಧಾರ್‌ಕಾರ್ಡ್ ಅಗತ್ಯ ಎಂದು ತಿಳಿಸಿದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಕೆ.ಸಿ.ನಾಗರಾಜ್, ಶಂಕರಮೂರ್ತಿ, ರವಿಶಂಕರೆಡ್ಡಿ, ಸೈಯದ್ ಅನಿಸ್, ವಿಜಯಕುಮಾರ್, ರವಿಮಲ್ಲಾಪುರ, ಪ್ರಕಾಶ್ ರಾಮನಾಯ್ಕ, ಆರ್.ನರಸಿಂಜರಾಜು, ಮಂಜುನಾಥ್‌ಗೊಪ್ಪೆ ಇತರರು ಇದ್ದರು.
ಆರೋಗ್ಯ ಜಾಗೃತಿ 25ರಿಂದ
ಉತ್ಸವ ಹಾಗೂ ಜಯಂತ್ಯುತ್ಸವದ ಅಂಗವಾಗಿ ಮಠದಲ್ಲಿ ಸೆ.25ರಿಂದ ಅಕ್ಟೋಬರ್ 4ರವರೆಗೆ ಆರೋಗ್ಯ, ಯೋಗ, ಆಯುರ್ವೇದ ಜಾಗೃತಿ ಕಾರ‌್ಯಕ್ರಮ ಏರ್ಪಡಿಸಲಾಗಿದೆ ಎಂದು ಬಸವಕುಮಾರ ಸ್ವಾಮೀಜಿ ಹೇಳಿದರು. ಚನ್ನಬಸವಣ್ಣ ಬೆಳಗ್ಗೆ 6ರಿಂದ 7ವರೆಗೆ ಉಪನ್ಯಾಸ ನೀಡುವರು. ಸಂಜೆ 7ರಿಂದ 8ರವರೆಗೆ ಪ್ರವಚನ, ವಿಶೇಷ ಉಪನ್ಯಾಸವಿರುತ್ತದೆ ಎಂದರು.