ಜಿಲ್ಲೆ

ಜಯದೇವ ಜಗದ್ಗುರುಗಳ ಕೊಡುಗೆ ಅಪಾರ


ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಶೂನ್ಯಪೀಠದ ಮುರುಘಾ ಪರಂಪರೆಯ ಶ್ರೀ ಜಯದೇವ ಜಗದ್ಗುರುಗಳ ಕಾಲದ ಸೇವೆ, ಬಣ್ಣನೆಗೆ ನಿಲುಕದ್ದು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಮುರುಘಾಮಠದಲ್ಲಿ ಶ್ರೀ ಜಯದೇವ ಜಗದ್ಗುರುಗಳ 150 ನೇ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶ್ರೀಗಳು ಪ್ರಸಾದ ನಿಲಯಗಳನ್ನು ಸ್ಥಾಪಿಸುವ ಮೂಲಕ ಬಡ ವಿದ್ಯಾರ್ಥಿಗಳ ಬಾಳಿಗೆ ಭರವಸೆ ತುಂಬಿದ್ದರು. ಸಮಾಜದಲ್ಲಿ ಸತ್ಕಾರ್ಯ ಉಳಿಯುತ್ತದೆ. ಶ್ರೀಗಳು ಸಮಾಜಕ್ಕೆ ಸಲ್ಲಿಸಿರುವ ಸೇವೆ ಸದಾ ನಮ್ಮೊಂದಿಗೆ ಇದೆ. ನಾವಿಂದು ಶ್ರೀಗಳನ್ನು ಸ್ಮರಿಸದಿದ್ದರೆ ಅವರ ಸೇವೆಯ ಮಹತ್ವ ಮುಂದಿನ ಪೀಳಿಗೆಗೆ ಅರಿವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ಈ ನಾಡಿಗೆ ಜಯದೇವ ಗುರುಗಳೇ ಒಂದು ಕೊಡುಗೆಯಾಗಿದ್ದಾರೆ. ನಾಡಿನ ವಿವಿಧೆಡೆ ಮಠ-ಪೀಠಗಳನ್ನು ಸ್ಥಾಪಿಸಿ, ಆರೋಗ್ಯ, ಶಿಕ್ಷಣ, ಅನ್ನ ದಾಸೋಹದ ಮೂಲಕ ಅನನ್ಯ ಸೇವೆ ಮಾಡಿದ್ದಾರೆ. ಅವರ ಹುಟ್ಟೂರು ರಾಯಚೂರಿನ ಬಿನ್ನಾಳದಲ್ಲಿ ಜನ್ಮದಿನವನ್ನು ಜಾತ್ರೆಯನ್ನಾಗಿ ಆಚರಿಸಲಾಗಿದೆ. ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ಹಲವೆಡೆ ಅವರ ಘನ ವ್ಯಕ್ತಿತ್ವದ ಸ್ಮರಣೆ ನಡೆದಿದೆ ಎಂದರು.