ಜಿಲ್ಲೆ

ಜಯದೇವ ಕಲ್ಪವೃಕ್ಷ ವನ ಶೀಘ್ರ ನಿರ್ಮಾಣ

ಚಿತ್ರದುರ್ಗ: ಜಾತಿ, ಮತ ಭೇದವಿಲ್ಲದೆ ಕಾಯಕ ಜೀವಿಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ, ಸಾಮಾಜಿಕ, ಸಮಾನತೆ ಕಾಳಜಿ ಬಸವಣ್ಣನವರಿಗೆ ಬರದೆ ಹೋಗಿದ್ದರೆ ತಳ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ ಎಂದು ಮೇದಾರ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮುರುಘಾಮಠ, ಎಸ್‌ಜೆಎಂ ವಿದ್ಯಾಪೀಠ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿಮಂಗಳವಾರ ಹಮ್ಮಿಕೊಂಡಿರುವ ಸಸಿ ನೆಡುವ ಸಪ್ತಾಹದ 6ನೇ ದಿನದ ಕಾರ್ಯಕ್ರಮಕ್ಕೆ ಕೇತೇಶ್ವರ ಮಠ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ತಳ ಸಮುದಾಯಗಳ ಜನರ ಏಳಿಗೆ ಬಯಸಿದ್ದ ಬಸವಾದಿ ಶಿವಶರಣರ ಆಶಯಕ್ಕೆ 21ನೇ ಶತಮಾನದಲ್ಲಿ ಮುರುಘಾ ಮಠದ ಮೂಲಕ ಮತ್ತೆ ಮರುಜೀವ ಬಂದಿತು ಎಂದರು.
ಯೋಗವನ ಮೇದಾರ ಗುರುಪೀಠದ ನಡುವಿರುವ ಮುರುಘಾಮಠದ ಜಾಗದಲ್ಲಿ ಜಯದೇವ ಕಲ್ಪವೃಕ್ಷ ವನ ನಿರ್ಮಿಸುವ ಯೋಜನೆ ಶೀಘ್ರ ಅನುಷ್ಠಾನ ಗೊಳಿಸಲಾಗುವುದು ಎಂದು ತಿಳಿಸಿದರು.
ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಕ್ರಾಂತಿ ಕಾಯಕ ಚಳುವಳಿ ಶಿವಶರಣರ ಆಂದೋಲನ, ಅದೊಂದು ಸರ್ವಸಮಾನತೆಯ ಮೌನ ಕ್ರಾಂತಿ ಎಂದು ಶಿಹೇಳಿದರು.
ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಮೇದಾರ ಸಮಾಜದ ಮುಖಂಡರಾದ ರಾಮಪ್ಪ, ಜಗದೀಶ್, ರವಿಕುಮಾರ್, ಶಂಕರ್, ಸಮಾಜ ಸೇವಕ ಸೋಮಶೇಖರ್ ಸೀಬಾರ, ರಾಜ್ಯ ಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪಿಎನ್‌ಸಿ ಮುಖ್ಯಸ್ಥ ಪ್ರೇಮ್ ಶ್ರೀವಾತ್ಸವ, ಎಂ.ಎಸ್.ಮೃತ್ಯುಂಜಯ, ವರ್ತಕರಾದ ಶಿವಯೋಗಿ, ಕುಮಾರ್, ನವೀನ್ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಕವಾಡಿಗರಟ್ಟಿ ಪ್ರಿಯದರ್ಶಿನಿ ಪ್ರೌಢಶಾಲೆಯ ಆವರಣದಲ್ಲೂ ಸಸಿಗಳನ್ನು ನೆಡಲಾಯಿತು. ಮುಖ್ಯಶಿಕ್ಷಕ ಮಹಾಂತೇಶ್ ಇತರರು ಇದ್ದರು.