ಮೈಸೂರು; ನಗರದ ಜಯದೇವ ಆಸ್ಪತ್ರೆಯಲ್ಲಿ ಎರಡು ದಿನ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿಯಾಗಿದ್ದು, ಸುಮಾರು 60 ಜನ ಹೃದಯ ರೋಗಿಗಳಿಗೆ ಸ್ಟಂಟ್ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ತಿಳಿಸಿದರು.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಅಮೆರಿಕದ ಮೆಡ್ಟ್ರಾನಿಕ್ಸ್ ಸಂಸ್ಥೆ , ಡಾ.ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಪೌಂಡೇಷನ್ ವಿಸ್ಕಿನ್‌ಸನ್ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಮೆರಿಕದ ಡಾ.ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್ ಪೌಂಡೇಷನ್‌ನ ಡಾ. ಸುಬ್ರಹ್ಮಣಿ ಮಾತನಾಡಿ, ನಾನು ಮೈಸೂರಿನಲ್ಲಿ ಹುಟ್ಟಿ ಬೆಳೆದು ವೈದ್ಯನಾಗಿ ಕಳೆದ 14 ವರ್ಷಗಳಿಂದ ಕನ್ನಡನಾಡಿನ ಜನರ ಸೇವೆ ಮಾಡುತ್ತಿದ್ದೇನೆ. ಈ ಬಾರಿಯು 250 ಸ್ಟಂಟ್‌ಗಳನ್ನು ಉಚಿತವಾಗಿ ನೀಡಿದ್ದು, ಅಮೆರಿಕದಲ್ಲಿರುವ ಅಡ್ವಾನ್ಸ್ ಟೆಕ್ನಾಲಜಿಗಿಂತಲೂ ಉತ್ತಮವಾದ ಸೇವೆ ಜಯದೇವ ಆಸ್ಪತ್ರೆಯಲ್ಲಿ ಸಿಗುತ್ತಿದ್ದು, ಇಷ್ಟೊಂದು ದೊಡ್ಡ ಹೃದಯ ರೋಗಿಗಳ ಆಸ್ಪತ್ರೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ವೈದ್ಯರು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. 3 ಜನ ಬಡರೋಗಿಗಳಿಗೆ ಧನಸಹಾಯ ಮಾಡಿದರು.
ಡಾ.ಸಂತೋಷ್, ಡಾ.ವೀಣಾ ನಂಜಪ್ಪ, ಡಾ.ಶ್ರೀಧರ್, ಡಾ.ಜಯಶೀಲನ್, ಡಾ.ನಿಖಿಲ್, ಡಾ.ಭಾರತಿ, ಡಾ.ದಿನೇಶ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿ.ಆರ್.ಒ ವಾಣಿಮೋಹನ್, ಶುಶ್ರೂಷಕರಾದ ಗುರುಮೂರ್ತಿ, ಸತೀಶ್, ಬಾಲರಾಜ್, ಪ್ರತಾಪ್, ಮಹಾದೇವಿ, ದೀಪಿಕಾ ಭಾಗವಹಿಸಿದ್ದರು.