ಹಾಸನ: ಆಯುಧ ಪೂಜೆ ಹಾಗು ವಿಜಯದಶಮಿ ಹಿನ್ನಲೆಯಲ್ಲಿ ಗುರುವಾರ ಹಬ್ಬದ ನಗರದ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಪೂಜೆ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.
ನಗರದ ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ಸೇರಿ ವಾಹನ ಸಂಚಾರದಲ್ಲಿ ಭಾರೀ ವ್ಯತ್ಯಯವಾಯಿತು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಗರದ ಮಹಾವೀರ ವೃತ್ತ, ಕಟ್ಟಿನಕೆರೆ ಮಾರುಕಟ್ಟೆ, ಸುಭಾಷ್ ಚೌಕ, ತಣ್ಣೀರುಹಳ್ಳದಲ್ಲಿ ಗಂಟೆಗಟ್ಟಲೇ ವಾಹನಗಳು ನಿಂತಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲು ಸಾಧ್ಯವಾಗದೆ ಹೊರ ಜಿಲ್ಲೆಯ ಪ್ರಯಾಣಿಕರು ಸಹ ಹೈರಾಣಾದರು.
ಖರೀದಿ ಜೋರು:
ಹಬ್ಬದ ನಿಮಿತ್ತ ಪೂಜಾ ಸಾಮಾಗ್ರಿಗಳ ಬೆಲೆ ಮಿತಿ ಮೀರಿದ್ದರೂ ಜನರು ಅದ್ಯಾವುದನ್ನು ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದರು. ಬೆಳಿಗ್ಗೆ 11 ಗಂಟೆಯಿಂದಲೇ ಮಾರುಕಟ್ಟೆಯತ್ತ ಗ್ರಾಹಕರು ಬಂದರು. ನಗರದ ಮಹಾವೀರ ವೃತ್ತ, ಸುಭಾಷ್ ಚೌಕ, ತಣ್ಣೀರುಹಳ್ಳ, ರೈಲ್ವೆ ನಿಲ್ದಾಣ, ಜಿಲ್ಲಾ ಕ್ರೀಡಾಂಗಣ ಮುಂಭಾಗ, ರಿಂಗ್ ರಸ್ತೆ, ಡೈರಿ ವೃತ್ತ ಸೇರಿ ಮುಂತಾದ ಕಡೆ ರಸ್ತೆ ಬದಿ ವ್ಯಾಪಾರ ನಡೆಯಿತು. ಬೂದುಗುಂಬಳ ಹಾಗು ಹಾರಗಳು ಯತೇಚ್ಛ ಪ್ರಮಾಣದಲ್ಲಿ ಮಾರಾಟವಾದ್ದರಿಂದ ವ್ಯಾಪಾರಿಗಳು ರಸ್ತೆಗೆ ನಿಂತು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯಕಂಡುಬಂತು.
ಒಂದು ಮಾರು ಚೆಂಡು ಹೂವು ಬೆಲೆ 80 ರೂ., ಸೇವಂತಿ 130 ರಿಂದ 150 ರೂ., ಮಲ್ಲಿಗೆ 150 ರೂ., ಬೂದುಗುಂಬಳ ಕೆ.ಜಿ.ಗೆ ಮಧ್ಯಾಹ್ನದ ವರೆಗೆ 25 ರೂ. ಇದ್ದರೆ ಸಂಜೆ 20 ರೂ.ಗೆ ಲಭ್ಯವಾಯಿತು. ಸೇಬು ಕೆ.ಜಿ.ಗೆ 100 ರೂ., ಕಿತ್ತಳೆ ಹಣ್ಣು ಒಂದೂವರೆ ಕೆ.ಜಿ.ಗೆ 100 ರೂ., ಸಪೋಟ 100 ರೂ., ಮೋಸಂಬಿ 180 ರೂ., ದಾಳಿಂಬೆ 200 ರೂ., ಬಾಳೆಹಣ್ಣು ಕೆ.ಜಿ.ಗೆ 120 ರೂ., ಬಾಳೆಕಂದು ಜೋಡಿಗೆ 40 ರೂ., ಕಬ್ಬು ಕಟ್ಟು ಒಂದಕ್ಕೆ 40 ರೂ., ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ.ನಂತೆ ಮಾರಾಟವಾಯಿತು.
ವ್ಯಾಪಾರಿಗಳ ಸಂಖ್ಯೆ ಅಧಿಕ:
ಗ್ರಾಹಕರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಖರೀದಿಗೆ ಮುಂದಾಗಿದ್ದಾರೆಯಾದರೂ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆದಾಯ ಕಡಿಮೆ ಎಂದು ಬಾಳೆಕಂದು ಮಾರಾಟಗಾರ ಮಳಲಿ ಗ್ರಾಮದ ಪಿ.ಟಿ.ಸ್ವಾಮಿ ಅವರು ಹೇಳಿದರು. ಮೊದಲು ಕಟ್ಟಿನಕೆರೆ ಹಾಗು ಮಹಾವೀರ ವೃತ್ತದಲ್ಲಿ ಮಾತ್ರ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ಇರುತ್ತಿತ್ತು. ಆದರೆ ಈಗ ನಗರ ಸುತ್ತಲೂ ರಸ್ತೆ ಬದಿ ವ್ಯಾಪಾರಿಗಳು ಹುಟ್ಟಿಕೊಂಡಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಯುಧ ಪೂಜೆ ಹಿನ್ನಲೆಯಲ್ಲಿ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಹಿನ್ನಲೆಯಲ್ಲಿ ಬೈಕ್, ಕಾರುಗಳನ್ನು ಶುಭ್ರಗೊಳಿಸಲು ಸರ್ವಿಸ್ಸ್ ಸೆಂಟರ್‌ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.