ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸುವ ಪ್ರತಿನಿಧಿಗಳ ಆಗಮನ ಆರಂಭವಾಗಿದ್ದು, ಮೊದಲ ತಂಡವಾಗಿ ಭಾನುವಾರ ನಗರಕ್ಕೆ ಆಗಮಿಸಿದ ಜಮ್ಮು ಕಾಶ್ಮೀರ ತಂಡಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಜಮ್ಮು ಕಾಶ್ಮೀರನಿಂದ 80 ಯುವ ಪ್ರತಿನಿಧಿಗಳು ಹಾಗೂ ತಂಡದ ನಾಯಕರು ಆಗಮಿಸಿದರು. ಕೆಸಿಡಿ ಕಾಲೇಜಿನ ಆವರಣಕ್ಕೆ ಆಗಮಿಸಿದ ತಂಡದ ಸದಸ್ಯರಿಗೆ ತಿಲಕ ಇಟ್ಟು, ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು.
ನಂತರ ರಂಗಾಯಣದ ಕಲಾತಂಡದ ಡೊಳ್ಳು, ಡೋಲು ಹಾಗೂ ಇನ್ನಿತರ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕಾಲೇಜಿಗೆ ಕರೆದೊಯ್ಯಲಾಯಿತು. ಜನೋತ್ಸವ ಉಸ್ತುವಾರಿ ಅಧಿಕಾರಿ, ಕವಿವಿ ಕುಲ ಸಚಿವ ಯಶಪಾಲ ಕ್ಷೀರಸಾಗರ, ಹುಡಾ ಆಯುಕ್ತ ಸಂತೋಷ ಬಿರಾದಾರ ಹಾಗೂ ಇತರ ಅಧಿಕಾರಿಗಳು ಜಮ್ಮು ಕಾಶ್ಮೀರದ ತಂಡದ ಸದಸ್ಯರಿಗೆ ಯುವ ಜನೋತ್ಸವ ಮಾರ್ಗಸೂಚಿ ಹಾಗೂ ಕಿಟ್‌ಗಳನ್ನು ವಿತರಿಸಿದರು.