ಗುಂಡ್ಲುಪೇಟೆ: ತಾಲೂಕಿನ ಹೊರೆಯಾಲ ಗ್ರಾಮದ ಜಮೀನುಗಳಲ್ಲಿ ಭಾರೀ ಗಾತ್ರದ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಗಾತ್ರದ ಹುಲಿಯೊಂದು ಸಂಚರಿಸುತ್ತಿದೆ. ತೇವಾಂಶವಿರುವ ಮಣ್ಣಿನಲ್ಲಿ ಹುಲಿಯ ಹೆಜ್ಜೆಗಳ ಗುರುತುಗಳನ್ನು ಕಂಡ ರೈತರು ದಿಗಿಲುಗೊಂಡಿದ್ದಾರೆ.
ಜನ- ಜಾನುವಾರುಗಳ ಮೇಲೆ ಯಾವುದೇ ಸಂದರ್ಭ ಹುಲಿ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಮೌನವಾಗಿರುವುದನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಇದಕ್ಕೆ ಪೂರಕವಾಗಿ ಭಾನುವಾರ ಬೆಳಗ್ಗೆ ಬೆಳೆ ಕಾವಲಿಗೆ ಹೋಗಿದ್ದ ಹೊರೆಯಾಲದ ಸದಾನಂದ ಹಾಗೂ ಮಹೇಶ ಎಂಬ ರೈತರ ಮೇಲೆ ದೊಡ್ಡ ಹುಲಿಯೊಂದು ದಾಳಿಗೆ ಮುಂದಾಗಿದೆ. ಇಬ್ಬರೂ ಸಮಯಪ್ರಜ್ಞೆಯಿಂದ ಬೈಕ್ ಏರಿ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ. ಸಮೀಪದ ಕಬ್ಬಿನ ಗದ್ದೆಯಲ್ಲಿ ಆಗಾಗ್ಗೆ ಹುಲಿಯ ಗರ್ಜನೆ ಕೇಳಿಬರುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಳೆಗಳ ಕಾವಲಿಗೆ ಹಾಗೂ ಕೃಷಿ ಕೆಲಸಗಳಿಗೆ ಜಮೀನುಗಳತ್ತ ಹೋಗಲು ಭಯವಾಗುತ್ತಿದ್ದು, ಹುಲಿ ಸೆರೆ ಕಾರ್ಯಾಚರಣೆಗೆ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.