ಜಿಲ್ಲೆ

ಜಮೀನು ವಿವಾದ ಮಹಿಳೆ ಕೊಲೆಯಲ್ಲಿ ಅಂತ್ಯ

ನಾಗಮಂಗಲ: ತಾಲೂಕಿನ ಬೆಳ್ಳೂರು ಹೋಬಳಿಯ ಗಾಣಸಂದ್ರ ಗ್ರಾಮದಲ್ಲಿ ಭಾನುವಾರ ಸಂಜೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಮಹಿಳೆ ಮೇಲೆ ಕಾರು ಹತ್ತಿಸಿದ್ದರಿಂದ ಆಕೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಗಾಣಸಂದ್ರ ಗ್ರಾಮದ ರಾಮಕೃಷ್ಣಯ್ಯನ ಪತ್ನಿ ಜಯಲಕ್ಷ್ಮಮ್ಮ(50) ಕೊಲೆಯಾದವರು. ಜಮೀನು ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ನವೀನ್ ಮತ್ತು ಜಗಳ ಬಿಡಿಸಲು ಹೋಗಿದ್ದ ದೇವರಾಜು ಹಲ್ಲೆಗೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಗ್ರಾಮದ ಗೌಡಯ್ಯ, ಮಗ ಅನಿಲ್‌ಕುಮಾರ್, ಸಂಬಂಧಿ ಬಸವರಾಜು ಸೇರಿದಂತೆ ಎಂಟು ಜನರ ಗುಂಪು ಮಹಿಳೆಯ ಮೇಲೆ ಕಾರು ಹತ್ತಿಸಿ, ಇಬ್ಬರನ್ನು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಯಲಕ್ಷ್ಮಮ್ಮನಿಗೆ ಕಳೆದ 10 ವರ್ಷದ ಹಿಂದೆ ಗಾಣಸಂದ್ರ ಗ್ರಾಮದ ಸ.ನಂ.84ರಲ್ಲಿ ಬಗರ್‌ಹುಕುಂ ಸಾಗುವಳಿಯ ಜಮೀನು ಮಂಜೂರಾಗಿ ಇದಕ್ಕೆ ಸಂಬಂಧಿಸಿದ ಭೂ ದಾಖಲೆಗಳೂ ಇವರ ಹೆಸರಿನಲ್ಲಿದ್ದವು. ಅಂದಿನಿಂದ ಜಯಲಕ್ಷ್ಮಮ್ಮ ಜಮೀನು ಉಳುಮೆ ಮಾಡಿಸುತ್ತಿದ್ದರು. ಆದರೆ ಇದೇ ಗ್ರಾಮದ ಗೌಡಯ್ಯ ಮತ್ತವರ ಕುಟುಂಬದವರು ಮಹಿಳೆಗೆ ತೊಂದರೆ ಕೊಡುತ್ತಿದ್ದರು. ಅಲ್ಲದೆ ಜಮೀನಿನಲ್ಲಿ ಹಾಕಿಸಿರುವ ಕೊಳವೆಬಾವಿಯ ವಿದ್ಯುತ್ ವೈರನ್ನು ತುಂಡರಿಸಿದ್ದರು. ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತೆಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಜಯಲಕ್ಷ್ಮಮ್ಮ ಜಮೀನು ಉಳುಮೆ ಮಾಡಿಸುವ ಸಲುವಾಗಿಯೇ ಭಾನುವಾರ ಗ್ರಾಮಕ್ಕೆ ಆಗಮಿಸಿದ್ದರು. ಜಮೀನು ಉಳುಮೆ ಮಾಡಿಸುತ್ತಿದ್ದ ವೇಳೆ ಏಕಾಏಕಿ ಬಂದ ಗೌಡಯ್ಯ, ಮಗ ಅನಿಲ್‌ಕುಮಾರ್ ಸೇರಿದಂತೆ ಎಂಟು ಜನರಿದ್ದ ಗುಂಪು ಗಲಾಟೆ ನಡೆಸಿ, ಟ್ರಾೃಕ್ಟರ್ ಚಾಲಕ ನವೀನ್ ಮತ್ತು ಜಗಳ ಬಿಡಿಸಲು ಬಂದ ದೇವರಾಜು ಎಂಬುವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿತು. ರಸ್ತೆ ಬದಿಯಲ್ಲಿ ನಿಂತಿದ್ದ ಜಯಲಕ್ಷ್ಮಮ್ಮನ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಗುಂಪು ಯತ್ನಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಜಯಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಬೆಳ್ಳೂರು ಠಾಣೆ ಪೊಲೀಸರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಯಾಗಿರುವ ಜಯಲಕ್ಷ್ಮಮ್ಮನ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ವಶಕ್ಕೆ ಪಡೆದಿರುವ ನಾಲ್ವರನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಸೋಮವಾರ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಯತೀಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್, ಸಿಪಿಐ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.