ಜಿಲ್ಲೆ

ಜಮೀನು ವಶಪಡಿಸಿಕೊಂಡರೆ ಸಾಮೂಹಿಕ ಆತ್ಮಹತ್ಯೆ!

> ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ 2ನೇ ಹಂತದ ಭೂಸ್ವಾಧಿನಕ್ಕೆ ಗ್ರಾಮಸ್ಥರ ಆಕ್ರೋಶ

ಮಾಗಡಿ

ಕೆಂಪಾಪುರ ಗ್ರಾಮದಲ್ಲಿನ ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿಗೆ 2ನೇ ಹಂತದ ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ಗುರುವಾರ ಸರ್ವೇಗೆ ಮುಂದಾದ ಸರ್ವೇ, ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರಲ್ಲದೇ, ಜಮೀನು ವಶಪಡಿಸಿಕೊಂಡರೆ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿಗೆ 2ನೇ ಹಂತದಲ್ಲಿ 10 ಎಕರೆ ಭೂಮಿ ಸ್ವಾಧಿನಕ್ಕಾಗಿ ವಿಶೇಷ ಭೂಸ್ವಾಧಿನ ಅಧಿಕಾರಿಗಳು 50 ಬಾರಿ ನೋಟಿಸ್​ ಜಾರಿಗೊಳಿಸಿದಾಗ ಐವರಷ್ಟೇ ಜಮೀನು ನೀಡಲು ಸಮ್ಮತಿಸಿದ್ದರು, ಆದರೆ 40 ರೈತರು ಭೂಸ್ವಾಧಿನಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೂ ಸ್ವಾಧಿನಕ್ಕೆ ಸಮ್ಮತಿಸಿರುವ ರೈತರ ಜಮೀನನ್ನು ಅಳತೆ ಮಾಡಲು ಬಂದ ಅಧಿಕಾರಿಗಳು, ಸ್ವಾಧಿನಕ್ಕೆ ಸಮ್ಮತಿಸದ ರೈತರ ಜಮೀನನನ್ನೂ ಆಳತೆ ಮಾಡಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಕೆ.ಎಚ್​.ಹರೀಶ್​ ಗೌಡ ಮಾತನಾಡಿ, ಬಿಜೆಪಿ ಅವಧಿಯಲ್ಲಿ ಕೆಂಪೇಗೌಡರ ವೀರಸಮಾಧಿ ಅಭಿವೃದ್ಧಿಗಾಗಿ 10 ಎಕರೆ ಜಾಗವನ್ನು ಕೆಂಪೇಗೌಡ ಪ್ರಾಧಿಕಾರಕ್ಕೆ ಈಗಾಗಲೇ ನೀಡಲಾಗಿದೆ. ಈ ಜಾಗವನ್ನು ಅಭಿವೃದ್ಧಿಪಡಿಸದೆ 2ನೇ ಹಂತದಲ್ಲಿ ಮತ್ತೆ 10 ಎಕರೆ ಜಮೀನು ಸ್ವಾಧಿನ ಪಡಿಸಿಕೊಳ್ಳುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಹಳೇ ಜಾಗವನ್ನು ಮೊದಲು ಅಭಿವೃದ್ಧಿಪಡಿಸಿ, ವಿಶ್ವಪಾರಂಪರಿಕ ತಾಣವನ್ನಾಗಿಸಲಿ. ಇದಕ್ಕೆ ನಮ್ಮವಿರೋಧವಿಲ್ಲ. ಅದುಬಿಟ್ಟು 2ನೇ ಹಂತದಲ್ಲಿ ಸ್ವಾಧಿನಕ್ಕೆ ಮುಂದಾದರೆ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುತ್ತೇವೆ. ನಮ್ಮ ವಿರೋಧದ ನಡುವೆಯೂ ರ್ನಿಲಸಿ, ಸ್ವಾಧಿನಕ್ಕೆ ಮುಂದಾದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇದಕ್ಕೆ ತಾಲೂಕು, ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ತಿಪ್ಪಸಂದ್ರ ಹೋಬಳಿ ಆರ್​.ಐ.ವೆಂಕಟರಂಗಯ್ಯ ಮಾತನಾಡಿ, ಕೆಂಪೇಗೌಡ ವೀರಸಮಾಧಿ ಬಳಿ ಕೆಂಪೇಗೌಡ ಪ್ರಾಧಿಕಾರದಿಂದ ಜಂಟಿ ಸ್ಥಳ ತನಿಖೆ ಹಾಗೂ ಸರ್ವೇ ಕಾರ್ಯ ನಡೆಸಲು ತಹಸೀಲ್ದಾರ್​ ಆದೇಶದಂತೆ ನೋಟಿಸ್​ ಜಾರಿ ಮಾಡಲಾಗಿದ್ದು, ಇದಕ್ಕೆ 10 ಮಂದಿಯನ್ನು ಹೊರತುಪಡಿಸಿ ಉಳಿದ 40 ಮಂದಿ ರೈತರು ಭೂಸ್ವಾಧಿನಕ್ಕೆ ವಿರೋಧಿಸಿದ್ದಾರೆ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಗ್ರಾಮಸ್ಥರಾದ ರಾಮಣ್ಣ, ಗಿರಿಯಪ್ಪ, ನಟರಾಜು, ಡಾ.ಚಿಕ್ಕರಂಗಯ್ಯ, ರಮೇಶ್​, ಜಯಲಕ್ಷಮ್ಮ, ನರಸಮ್ಮ, ಲಕ್ಷ್ಮಮ್ಮ , ಗಂಗನರಸಮ್ಮ, ಪಾಪಯ್ಯ, ಸಂಜೀವಯ್ಯ, ನರಸಿಂಹಮೂರ್ತಿ, ಹುಚ್ಚಮ್ಮ ಇದ್ದರು.

ಸಭೆ ಕರೆದು ಕ್ರಮ

ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್​ ಡಿ.ಶರತ್​ ಕುಮಾರ್​, ಗ್ರಾಮಸ್ಥರು ಒಪ್ಪಿಗೆ ನೀಡಿದರಷ್ಟೇ ಭೂಸ್ವಾಧಿನ ಸಾಧ್ಯ. ಮತ್ತೊಮ್ಮೆ ಗ್ರಾಮಸ್ಥರ ಅಭಿಪ್ರಾಯ ಪಡೆದು ಅಧಿಕಾರಿಗಳ ಸಭೆ ನಡೆಸಿ, ಮುಂದಿನ ಕ್ರಮಗೊಳ್ಳುವುದಾಗಿ ತಿಳಿಸಿದರಲ್ಲದೇ, ನ್ಯಾಯಕಲ್ಪಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.