ಚಿತ್ರದುರ್ಗ: ರಾಜೀವ್‌ಗಾಂಧಿ ವಸತಿ ಯೋಜನೆಯಡಿ 418 ಕುಶಲಕರ್ಮಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಬಡಗಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಹೊರವಲಯದಲ್ಲಿ 10 ಎಕರೆ, 18 ಗುಂಟೆ ಜಮೀನನ್ನು ನಗರಸಭೆಗೆ ಹಸ್ತಾಂತರಿಸಿ 15 ವರ್ಷವಾದರೂ ವಸತಿ ಸೌಲಭ್ಯ ಕಲ್ಪಿಸಿಲ್ಲ ಎಂದು ಸಂಘದ ಅಧ್ಯಕ್ಷ ಎ.ಜಾಕೀರ್‌ಹುಸೇನ್ ಬೇಸರಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಕೊಡಿಸಿದ್ದರು. ಹೀಗಾಗಿ ಕೆಲ ಷರತ್ತಿನನ್ವಯ ನಗರಸಭೆಗೆ ಜಮೀನು ನೀಡಿದ್ದೇವೆ. ಈವರೆಗೂ ಕಾರ್ಯಗತವಾಗಿಲ್ಲ ಎಂದರು.
ಎಲ್ಲ ಸಮುದಾಯದವರು ಬಡಗಿ ಕೆಲಸ ಮಾಡುತ್ತಿದ್ದಾರೆ. ಕುಶಲ ಕಾರ್ಮಿಕರೆಲ್ಲರೂ ಬಡವರೇ ಆಗಿದ್ದಾರೆ. ಸರ್ಕಾರ ನಿವೇಶನ ಸೌಲಭ್ಯ ನೀಡಬೇಕಿತ್ತು. ಆದರೆ, ಸಂಘದಿಂದ ಕೊಟ್ಟರೂ ವಿಳಂಬ ಧೋರಣೆ ಏಕೆ ಎಂದು ಪ್ರಶ್ನಿಸಿದರು.
ಎರಡ್ಮೂರು ಬಾರಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ದಾಖಲಾತಿಯನ್ನು ನಗರಸಭೆಗೆ ಸಲ್ಲಿಸಿದ್ದೇವೆ. ಸರ್ಕಾರಗಳು ಬದಲಾಗುತ್ತಿವೆಯೇ ಹೊರತು ವಸತಿ ಮಾತ್ರ ನಿರ್ಮಾಣವಾಗಿಲ್ಲ. ವಸತಿ ಸಚಿವ ಸಂತೋಷ್ ಲಾಡ್, ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ತಿಂಗಳೊಳಗೆ 418 ಮಂದಿಯ ಪಟ್ಟಿಯನ್ನು ಮತ್ತೊಮ್ಮೆ ನೀಡಲಿದ್ದು, ತ್ವರಿತವಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಜಗದೀಶ್, ಚಂದ್ರಶೇಖರ್, ಅಸ್ಲಾಂ ಇತರರಿದ್ದರು.