ಜಿಲ್ಲೆ

ಜಮೀನು ನೀಡಲು ರೈತರ ವಿರೋಧ, ಕರ್ನಾಟಕ ಗೃಹ ಮಂಡಳಿ ವಿರುದ್ಧ ಆಕ್ರೋಶ, ರೈತರ ಅಳಲು ಆಲಿಸಿದ ಶಾಸಕ

ನೆಲಮಂಗಲ: ತಾಲೂಕಿನ ಮಾಚೋನಾಯಕನಹಳ್ಳಿ, ಅಹೋಬಲಪಾಳ್ಯ, ನರಸಿಂಹನಪಾಳ್ಯದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಭೂಸ್ವಾಧೀನ ಮಾಡಿಕೊಂಡಿರುವ ಜಮೀನನ್ನು ಯೋಜನೆಯಿಂದ ಕೈಬಿಡುವಂತೆ ರೈತರ ಒತ್ತಾಯ ಜೋರಾಗಿದೆ.

ಭೂಸ್ವಾಧೀನಪಡಿಸಿಕೊಂಡಿರುವ ವಿವಿಧ ಗ್ರಾಮಗಳ ರೈತರು ಸೋಮವಾರ ಮಾಚೋನಾಯಕನಹಳ್ಳಿಯಲ್ಲಿ ಸಮಾವೇಶಗೊಂಡು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2010ರಲ್ಲಿ ಮಾಚೋನಾಯಕನಹಳ್ಳಿ, ಅಹೋಬಲಪಾಳ್ಯ, ನರಸಿಂಹನಪಾಳ್ಯಗಳಲ್ಲಿನ 150ಕ್ಕೂ ಹೆಚ್ಚು ಸರ್ವೇ ನಂಬರ್‌ನಲ್ಲಿದ್ದ 425 ಎಕರೆ ಜಮೀನನ್ನು ಮಂಡಳಿಯು ಭೂಸ್ವಾಧೀನ ಪಡಿಸಿಕೊಂಡಿತ್ತು. ಬಳಿಕ 2013ರಲ್ಲಿ ಮತ್ತೊಮ್ಮೆ ಸುಮಾರು 354 ಎಕರೆ ಪ್ರದೇಶ ಗುರುತು ಮಾಡಿತ್ತು. ಇದನ್ನು ಪ್ರಶ್ನಿಸಿ 2013 ಜನವರಿ 28 ರಂದು ಎಲ್ಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ 354 ಎಕರೆ ಪೈಕಿ 250 ಎಕರೆ ಪ್ರದೇಶದ ರೈತರು ಮಾತ್ರ ನ್ಯಾಯಾಲಯದಲ್ಲಿ ಕೇಸ್ ಹಿಂತೆಗೆದುಕೊಂಡು ಜಮೀನನ್ನು ಮಂಡಳಿಗೆ ನೀಡಲು ಒಪ್ಪಿಗೆ ಸೂಚಿಸಿದ್ದರು. ಉಳಿದ 104 ಎಕರೆ ಜಮೀನಿನ ಪೈಕಿ 44 ಎಕರೆ ಜಮೀನನ್ನು ಪ್ರಭಾವಿ ಮುಖಂಡರೊಬ್ಬರು ರಕ್ಷಣೆ ಮಾಡಿಕೊಂಡಿದ್ದಾರೆ. ಇನ್ನುಳಿದ 60 ಎಕರೆ ಜಮೀನಿನ ರೈತರು ಭೂಮಿ ನೀಡಲು ನಿರಾಕರಿಸಿದ್ದು, ಭೂಸ್ವಾಧೀನ ಕೈಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ರೈತ ಉಮೇಶ್ ಮಾತನಾಡಿ, ಜಮೀನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾಕಷ್ಟು ರೈತರಿಗೆ ಗೃಹಮಂಡಳಿಯ ಭೂಸ್ವಾಧೀನದಿಂದಾಗಿ ನಷ್ಟವಾಗಿದೆ. ಆದ್ದರಿಂದ ನಮ್ಮ ಜಮೀನನ್ನು ಸ್ವಾಧೀನದಿಂದ ಕೈಬಿಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣ ನ್ಯಾಯಾಲಯಲ್ಲಿ ಇತ್ಯರ್ಥವಾಗಿಲ್ಲ. ಇದರ ನಡುವೆ ಗುತ್ತಿಗೆದಾರರು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಪ್ರಶ್ನೆ ಮಾಡಿದ್ದ ರೈ ಮುರಳೀಶ್ ಎಂಬಾತನ ಮೇಲೆ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ದೂರಿದರು.

ಗ್ರಾಮದ ಸಾಕಷ್ಟು ರೈತರಿಗೆ ಕೊಲೆ ಬೆದರಿಕೆ ಹಾಕಿ ಜಮೀನು ಪಡೆದುಕೊಳ್ಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ನ್ಯಾಯ ದೊರೆಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಶಾಸಕರ ಭೇಟಿ: ರೈತರು ಸಮಾವೇಶಗೊಂಡಿದ್ದ ತಾಲೂಕಿನ ಮಾಚೋನಾಯಕಹಳ್ಳಿಗೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಭೇಟಿ ನೀಡಿ, ರೈತರ ಅಹವಾಲು ಸ್ವೀಕರಿಸಿದರು. ಕೂಡಲೇ ಅಧಿಕಾರಿಗಳು, ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಲಾಗುವುದು. ಮುಂದಿನ ತಿಂಗಳು ಅಧಿವೇಶನದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.

ಮುಖಂಡರಾದ ಕೊಡಪ್ಪನಹಳ್ಳಿ ವೆಂಕಟೇಶ್, ವರದನಾರಾಯಣ್, ದೇಗನಹಳ್ಳಿ ಸುರೇಶ್, ವೆಂಕಟೇಶ್, ನಾಗರಾಜು ಮತ್ತಿತರರು ಇದ್ದರು.