ತಾಳಿಕೋಟೆ ತಾಲೂಕಿನ ಪತ್ತೇಪೂರ ಪಿ.ಟಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಲು ಸರ್ಕಾರದ ನಕ್ಷೆಯಲ್ಲಿ ತೋರಿಸಿದಂತೆ ದಾರಿ ಒದಗಿಸಬೇಕೆಂದು ತಹಸೀಲ್ದಾರ್ ಕಾರ್ಯಾಲಯದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕುಳಿತಿರುವುದು. ಅರವಿಂದ ಕುಲಕರ್ಣಿ, ಬಾಲಪ್ಪಗೌಡ ಲಿಂಗದಳ್ಳಿ, ದ್ಯಾಮನಗೌಡ ಹಾದಿಮನಿ ಇತರರಿದ್ದರು. 
ಜಿಲ್ಲೆ

ಜಮೀನು ದಾರಿಗಾಗಿ ಆಗ್ರಹಿಸಿ ತಾಳಿಕೋಟೆ ತಹಸೀಲ್ದಾರ್ ಕಚೇರಿ ಎದುರು ಧರಣಿ

ತಾಳಿಕೋಟೆ: ಜಮೀನು ದಾರಿ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪತ್ತೇಪೂರ ಪಿ.ಟಿ ಗ್ರಾಮದ ರೈತರು ತಾಳಿಕೋಟೆ ತಹಸೀಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿ, ಜಮೀನಿಗೆ ಹೋಗಲು ದಾರಿ ಇಲ್ಲದಿದ್ದರೆ ಅಂಥವುಗಳಿಗೆ ಅನುಭೋಗದ ಹಕ್ಕಿನಡಿ 1882 ಸಿ, ಐಪಿಸಿ 1973 ಕಲಂ 147ರ ಪ್ರಕಾರ ತಹಸೀಲ್ದಾರ್ ಅವರು ಮ್ಯಾಜಿಸ್ಟ್ರೇಟ್ ರೀತಿ ಕಾರ್ಯ ನಿರ್ವಹಿಸಿ ದಾರಿ ಮಾಡಿಕೊಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಇಲ್ಲಸಲ್ಲದ ನೆಪ ಹೇಳಿ ಜಿಲ್ಲೆಯ ಎಲ್ಲ ತಹಸೀಲ್ದಾರ್‌ರು ಬೇಜವಾಬ್ದಾರಿತನದಿಂದ ನುಣಿಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪತ್ತೇಪೂರ ಪಿ.ಟಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಲು ನಕ್ಷೆಯಲ್ಲಿ ದಾರಿ ಗುರುತು ಇದೆ. ಮೇಲಾಗಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾರಿ ಕೊಡಲು ಆದೇಶವಾಗಿದೆ. ಹೀಗಿದ್ದರೂ ತಾಳಿಕೋಟೆ ತಹಸೀಲ್ದಾರ್ ದಾರಿ ಮಾಡಿಕೊಡಲು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

ಕಳೆದ ಹತ್ತು ವರ್ಷಗಳಿಂದ ದಾರಿಗಾಗಿ ಹೋರಾಟ ಮಾಡಲಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸುತ್ತೋಲೆ ಹೊರಡಿಸಿದೆ. ಸರ್ಕಾರ ಸುತ್ತೋಲೆ ಹೊರಡಿಸಿದಾಗಿನಿಂದ ವಿಜಯಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಜಿಲ್ಲಾಡಳಿತ ದಾರಿಗಾಗಿ ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರವಿದೆ. ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲಕುಮಾರ ಅವರು ಕಟ್ಟುನಿಟ್ಟಾಗಿ ಕ್ರಮ ವಹಿಸಲು ಈಗಾಗಲೇ ಸೂಚಿಸಿದ್ದರೂ ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸದೆ ಇರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಸುತ್ತೋಲೆಯಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ದಾರಿ ಮಾಡಿಕೊಡುತ್ತಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ದಾರಿ ಮಾಡಿಕೊಡುವ ಕಾರ್ಯ ನಡೆದಿಲ್ಲ ಎಂದರು.

ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ದ್ಯಾಮನಗೌಡ ಹಾದಿಮನಿ, ಶ್ರೀನಿವಾಸ ಗೊಟಗುಣಕಿ, ಮಲ್ಲನಗೌಡ ದೇವರಡ್ಡಿ, ತಾಲೂಕು ಉಪಾಧ್ಯಕ್ಷ ಶಿವಯೋಗಿ ಗೊಟಗುಣಕಿ, ಮಲ್ಲಣ್ಣ ಸಿಂಗನಳ್ಳಿ, ಮಡಿವಾಳವ್ವ ಮಾರಲಭಾವಿ, ಲಕ್ಷ್ಮೀಬಾಯಿ ಗೊಟಗುಣಕಿ, ಗಂಗಮ್ಮ ಸಿಂಗನಳ್ಳಿ ಇತರರಿದ್ದರು.