ಜಿಲ್ಲೆ

ಜಮೀನಿನಲ್ಲಿ ಶುಂಠಿ ಕಳ್ಳತನ ಮಾರಾಟ ಮಾಡಲು ಬಂದಿದ್ದ ಚೋರ ಹಿಡಿದ ರೈತರು

Hassan - Mohan Kanthur

   ಹಾಸನ: ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಬಂದಿದ್ದ ಚೋರನನ್ನು ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಹೊರವಲಯದ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅರಸೀಕೆರೆ ತಾಲ್ಲೂಕಿನ ಬಂದೂರು ಮೂಲದ ಚಂದ್ರ ಬಂಧಿತ ಆರೋಪಿ. ಭಾನುವಾರ ರಾತ್ರಿ ಹಾಸನ ತಾಲ್ಲೂಕಿನ ಅಗಲಹಳ್ಳಿ ಗ್ರಾಮದ ರೈತ ಕೃಷ್ಣಮೂರ್ತಿ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ 50 ಚೀಲ ಶುಂಠಿಯನ್ನು ಕಿತ್ತುಕೊಂಡು ಕಳ್ಳರು ಎಸ್ಕೇಪ್ ಆಗಿದ್ದರು.

ಮಾರನೇ ದಿನ ಕೃಷ್ಣಮೂರ್ತಿ ಜಮೀನಿಗೆ ಹೋದ ವೇಳೆ ಶುಂಠಿ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರೊಂದಿಗೆ ಹಾಸನದಲ್ಲಿ ಶುಂಠಿ ತೊಳೆಯುವವರನ್ನು ಸಂಪರ್ಕಿಸಿದ್ದಾರೆ.

ಅಲ್ಲಿದ್ದವರು ದೊಡ್ಡಮಂಡಿಗನಹಳ್ಳಿಯಲ್ಲಿರುವ ಶುಂಠಿ ತೊಳೆಯುವ ಶೆಡ್‌ಗೆ ಬೆಳಗಿನ ಜಾವದಲ್ಲಿ ಯಾರೋ 50 ಚೀಲ ಶುಂಠಿ ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೂಡಲೇ ದೊಡ್ಡಮಂಡಿಗನಹಳ್ಳಿಯ ಶುಂಠಿ ತೊಳೆಯುವ ಶೆಡ್‌ಗೆ ಬಂದು ಪರಿಶೀಲಿಸಿದರು. ಈ ವೇಳೆ ಆಟೋದಲ್ಲಿ ಶುಂಠಿ ಚೀಲಗಳನ್ನು ತುಂಬಿಕೊಂಡು ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸುತ್ತಿದ್ದ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ಖದೀಮರ ತಂಡ ಬೇಲೂರು ತಾಲ್ಲೂಕಿನ ಕಾಮೇನಹಳ್ಳಿಯಲ್ಲೂ ಶನಿವಾರ ರಾತ್ರಿ ಶುಂಠಿ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ತಿಳಿದಿದೆ.

ಕಳ್ಳನನ್ನು ವಶಕ್ಕೆ ಪಡೆದಿರುವ ಹಗರೆ ಪೊಲೀಸರು ಉಳಿದ ಚೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಸನ ಗ್ರಾಮಾಂತರ ಹಾಗೂ ಹಗರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಟೊಮೆಟೋ ನಂತರ ಹಾಸನ ಜಿಲ್ಲೆಯಲ್ಲಿ ಶುಂಠಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ರೈತರಲ್ಲಿ ಆತಂಕ ತರಿಸಿದೆ