ಮಳವಳ್ಳಿ: ತಾಲೂಕಿನ ಬುಳ್ಳಿಕೆಂಪನದೊಡ್ಡಿ ಸಮೀಪ ಗುರುವಾರ ಉಳುಮೆ ಮಾಡುತ್ತಿದ್ದಾಗ ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ಕಂಬದ ಬಳಿ ವಿದ್ಯುತ್ ಪ್ರವಹಿಸಿ ಹಸುವೊಂದು ಸ್ಥಳದಲ್ಲೇ ಮೃತಪಟ್ಟಿದೆ.
ತಾಲೂಕಿನ ಕಿರುಗಾವಲು ಗ್ರಾಮದ ಪ್ರಭು ಅವರ ಹಸು ವಿದ್ಯುತ್ ಅವಘಡದಿಂದ ಮೃತಪಟ್ಟಿದೆ. ಅವರು ಬುಳ್ಳಿ ಕೆಂಪನದೊಡ್ಡಿ ರೈತ ಮಹಿಳೆ ಹೊಂಬಮ್ಮ ಅವರ ಜಮೀನಿನಲ್ಲಿ ನಡೆಯುತ್ತಿದ್ದ ಭತ್ತದ ನಾಟಿ ಕಾರ್ಯಕ್ಕೆ ತನ್ನ ಹಸುಗಳ ಜತೆ ಉಳುಮೆ ಮಾಡಲು ಕೂಲಿ ಕೆಲಸಕ್ಕಾಗಿ ಬಂದಿದ್ದರು. ನಾಟಿ ಕೆಲಸಕ್ಕೆ ನೀರು ತುಂಬಿಸಿದ್ದ ಜಮೀನು ಹದಗೊಳಿಸುವ ವೇಳೆ ವಿದ್ಯುತ್ ಪ್ರವಹಿಸಿ ಒಂದು ಹಸು ಸ್ಥಳದಲ್ಲೇ ಮೃತಪಟ್ಟಿದೆ. ವಿದ್ಯುತ್ ಸ್ಪರ್ಶವಾಗುತ್ತಿರುವುದರಿಂದ ಎಚ್ಚೆತ್ತು ಎಲ್ಲರೂ ದೂರ ಹೋಗಿ ಅಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಸೆಸ್ಕ್ ಕಚೇರಿಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿಸಿದ್ದಾರೆ. ಹಸುಗಳಿಂದ ಕೃಷಿ ಕೆಲಸಕ್ಕೆ ಉಳುಮೆಯ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಪ್ರಭು ಘಟನೆಯಿಂದ ಕಂಗಾಲಾಗಿ ಗೋಳಾಡಿದರು.
ಸ್ಥಳಕ್ಕೆ ಸೆಸ್ಕ್ ಅಧಿಕಾರಿ ಶ್ರೀಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಿಸಲಾಗುವುದೆಂದು ರೈತನನ್ನು ಸಂತೈಸಿದರು. ಪಶು ವೈದ್ಯಾಧಿಕಾರಿ ಮಂಜುನಾಥ್ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.