ಅಂಚೆಚೋಮನಹಳ್ಳಿಯಲ್ಲಿ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಲಾಯಿತು. ಸಿಂಗಟಗೆರೆ ವೃತ್ತದ ಆರ್‌ಐ ಆರ್.ರವಿಕುಮಾರ್, ಸರ್ವೇಯರ್ ಉಮೇಶ್, ಅಶೋಕ್, ಫ್ರಾನ್ಸಿಸ್, ಹುಸೇನ್ ಮತ್ತು ಜಯಮ್ಮ ಇದ್ದರು. 
ಜಿಲ್ಲೆ

ಜಮೀನಿನ ರಸ್ತೆ ಅತಿಕ್ರಮ ತೆರವು

ಕಡೂರು: ಅಂಚೆಚೋಮನಹಳ್ಳಿ ಸರ್ವೇ ನಂ.89ರ ಪೈಕಿ ಜಮೀನಿಗೆ ತೆರಳಲು ಇರುವ ರಸ್ತೆ ಒತ್ತುವರಿ ಮಾಡಿದ್ದನ್ನು ತಹಸೀಲ್ದಾರ್ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಪೊಲೀಸ್ ನೆರವಿನೊಂದಿಗೆ ಶುಕ್ರವಾರ ತೆರವುಗೊಳಿಸಿದರು.

ನನ್ನ ಜಮೀನಿಗೆ ಇರುವ ನಕಾಶೆಯ ರಸ್ತೆಯನ್ನು ಜಯಮ್ಮ, ಈಶ್ವರಪ್ಪ ಎಂಬುವರು ಅತಿಕ್ರಮಿಸಿದ್ದು ಜಮೀನಿಗೆ ಹೋಗಲು ಬಿಡುತ್ತಿಲ್ಲ ಎಂದು ಅಂಚೆಚೋಮನಹಳ್ಳಿ ಚಂದ್ರಪ್ಪ ಎಂಬುವವರು ಕಡೂರು ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ಸ್ಥಳ ಪರಿಶೀಲನೆ ನಡೆಸಿ ನಕಾಶೆಯ ಪ್ರಕಾರ ರಸ್ತೆ ಇರಿಸಿ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಸೂಚಿಸಿದ್ದರು. ಆದರೂ ಒತ್ತುವರಿದಾರರು ಕಾನೂನು ಪಾಲಿಸಲು ಸಹಕರಿಸದಿದ್ದಾಗ ಕ್ರಮ ವಹಿಸಲು ಕಂದಾಯ ಇಲಾಖೆ ಮುಂದಾಯಿತು. ಸಿಂಗಟಗೆರೆ ವೃತ್ತದ ಕಂದಾಯ ಅಧಿಕಾರಿ ಆರ್.ರವಿಕುಮಾರ್, ಸರ್ವೇಯರ್ ಉಮೇಶ್ ಮತ್ತು ಸಿಬ್ಬಂದಿ ಅಶೋಕ್, ಫ್ರಾನ್ಸಿಸ್ ಅವರು ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ಅತಿಕ್ರಮ ತೆರವುಗೊಳಿಸಿದರು. ಪೊಲೀಸ್ ಸಿಬ್ಬಂದಿ ಹುಸೇನ್ ಮತ್ತು ಜಯಮ್ಮ ರಕ್ಷಣೆ ನೀಡಿದರು ಎಂದು ಕಂದಾಯ ನಿರೀಕ್ಷಕ ರವಿಕುಮಾರ್ ಮಾಹಿತಿ ನೀಡಿದರು.

ಈ ಕುರಿತು ಮಾತನಾಡಿರುವ ಜಯಮ್ಮ ಈಶ್ವರಪ್ಪ, ನನ್ನ ಜಮೀನಿನ ಅಕ್ಕ ಪಕ್ಕದ ಸರ್ವೇ ನಂ 23, 24 ಹಾಗೂ 25ರ ಜಮೀನಿನಲ್ಲಿ ನಕಾಶೆ ದಾರಿ ಇದ್ದರೂ ಸರ್ವೇ ನಂ.89ರಲ್ಲಿ ಮಾತ್ರ ನಕಾಶೆ ದಾರಿ ಇದೆ ಎಂದು ಅಧಿಕಾರಿಗಳು ತೆರವುಗೊಳಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.