ಕುರುಗೋಡು: ತಾಲೂಕಿನಲ್ಲಿ ಕಳೆದ ಮೂರು ದಿನದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಕೆಲವೆಡೆ ಸಂಚಾರ ಬಂದ್ ಆಗಿದೆ.
ದಮ್ಮೂರಿನಲ್ಲಿ ಜಮೀನಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಳೆಯಿಂದ ನೀರು ತುಂಬಿಕೊಂಡಿದ್ದು ಸಂಚಾರ ಬಂದ್ ಆಗಿದೆ. ಸಿದ್ದಮ್ಮನಹಳ್ಳಿ ಎರ‌್ರಂಗಳಿಗಿ ಹಳ್ಳ ಕೂಡ ತುಂಬಿ ಹರಿಯುತ್ತಿವೆ. ಕುರುಗೋಡಿನ ಬಸ್ ನಿಲ್ದಾಣ, ಹರಿಕೃಪ ಕಾಲೋನಿ, ಯಲ್ಲಾಪುರದ ಹಲವೆಡೆ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
ಭತ್ತ, ದಾಳಿಂಬೆ, ಅಂಜೂರ, ಮಾವಿನ ತೋಟಗಳಿಗೆ ನುಗ್ಗಿದ ನೀರನ್ನು ರೈತರು ಹೊರಹರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತುಂತುರು ಮಳೆ ಬೀದಿ ಬದಿಯ ವ್ಯಾಪಾರ, ಗೂಡಂಗಡಿ ಸೇರಿದಂತೆ ಇತರ ವಾಹಿವಾಟಿನ ಮೇಲೂ ಪ್ರಭಾವ ಬೀರಿದೆ.