ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಶನಿವಾರ ಗ್ರಾಮದ ಬಿಜೆಪಿ ಮುಖಂಡ ಡಿ.ಮಲ್ಲಿಕಾರ್ಜುನಸ್ವಾಮಿ ಇಲ್ಲಿನ ಚರಂಡಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಕಲುಷಿತ ನೀರು ನಿಂತಿರುವ ಸ್ಥಳದಲ್ಲೇ ಬಿಜೆಪಿ ಬಾವುಟ ನೆಟ್ಟಿರುವುದು  
ಜಿಲ್ಲೆ

ಜಮೀನಿಗೆ ಕಲುಷಿತ ನೀರು ಬಿಡುಗಡೆಗೆ ಬೇಸತ್ತ ರೈತ

ಜಮೀನಿನಲ್ಲಿ ಬಿಜೆಪಿ ಬಾವುಟ ನೆಟ್ಟು ಪ್ರತಿಭಟನೆ


ಯಳಂದೂರು: ತಾಲೂಕಿ ವೈ.ಕೆ.ಮೋಳೆ ಗ್ರಾಮದಲ್ಲಿ ಕಲುಷಿತ ನೀರು ರೈತರ ಜಮೀನಿಗೆ ನುಗ್ಗಿದ್ದು ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಶನಿವಾರ ಗ್ರಾಮಸ್ಥರೊಬ್ಬರು ಈ ಜಮೀನಿನಲ್ಲಿ ಬಿಜೆಪಿ ಪಕ್ಷದ ಬಾವುಟ ನೆಟ್ಟು ಪ್ರತಿಭಟನೆ ನಡೆಸಿದರು.


ಬಿಜೆಪಿ ಜಿಲ್ಲಾ ದಲಿತ ಮೋರ್ಚಾ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನಸ್ವಾಮಿ ಈ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದಿದ್ದಾರೆ. ಗ್ರಾಮದ ಕಲುಷಿತ ನೀರು ಬಂದು ಜಮೀನಿಗೆ ನುಗ್ಗಿದ ಪರಿಣಾಮ ಅಲ್ಲೇ ನೀರು ನಿಲುಗಡೆಯಾಗುತ್ತಿದ್ದು, ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ರೈತರು ಸಹ ಜಮೀನಿಗೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಈ ಹಿಂದೆ ಈ ನೀರು ಉಪ್ಪಿನಮೋಳೆ ಕೆರೆಗೆ ಸೇರುತ್ತಿತ್ತು, ಆದರೆ ಕಾಲುವೆ ಮುಚ್ಚಿದ್ದು, ಇದನ್ನು ದುರಸ್ತಿ ಮಾಡಿಸದೆ ಹಣ ಪಡೆದುಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ. ಈ ಬಗ್ಗೆ ಅಂಬಳೆ ಪಿಡಿಒ, ತಾ.ಪಂ. ಇಒ, ಸಂತೇಮರಹಳ್ಳಿ ನೀರಾವರಿ ಇಲಾಖೆ ಇಂಜಿಯರ್‌ಗಳಿಗೆ ಎಷ್ಟೇ ಮನವಿ ಸಲ್ಲಿಸಿದರೂ ಗಮನ ನೀಡುತ್ತಿಲ್ಲ ಎಂದು ದೂರಿದರು.

ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಶಾಸಕರು, ಬಿಜೆಪಿ ಉಸ್ತುವಾರಿ ಸಚಿವರು, ಸರ್ಕಾರವೇ ಬಿಜೆಪಿಯದ್ದಾಗಿದೆ. ಆದರೆ ಇಂತಹ ಒಂದು ಸಣ್ಣ ಸಮಸ್ಯೆಯನ್ನು ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಆಡಳಿತ ಯಂತ್ರ ಸೋತಿದೆ. ನಾನು ಪಕ್ಷದವನೇ ಆಗಿದ್ದು ಮನನೊಂದು ಪಕ್ಷದ ಬಾವುಟವನ್ನು ಇಲ್ಲಿ ನೆಟ್ಟು ಪ್ರತಿಭಟನೆ ನಡೆಸುತ್ತಿದ್ದೇನೆ. ಈಗಲಾದರೂ ಸಂಬಂಧಪಟ್ಟವರು ಸಮಸ್ಯೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.