ಜಮಖಂಡಿ: ಸಮಾಜಕ್ಕಾಗಿ ದುಡಿಯುವ ಎಲೆಮರೆಕಾಯಿಯಂತೆ ಇರುವ ಸಾಧಕರನ್ನು ಗುರುತಿಸುವ ಕಾರ್ಯ ಸದಾ ನಡೆಯಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಗುರುದೇವ ರಾನಡೆ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ, ತಾಲೂಕು ಕಸಾಪ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ನಮನ ಟ್ರಸ್ಟ್, ಸಾಹಿತ್ಯ ಸೌರಭ ವೇದಿಕೆ, ವೀರೇಶ್ವರ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಸಂಗಮೇಶ ಮಟೋಳಿ ವಿರಚಿತ ‘ಜಮಖಂಡಿ ತಾಲ್ಲೂಕಿನ ಅಪರೂಪದವರು’ ಕೃತಿ ಬಿಡುಗಡೆ ಮತ್ತು ರಾಜ್ಯಮಟ್ಟದ ಸಾಧಕರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲೆಮರೆಯ ಕಾಯಿಯಂತೆ ಸಮಾಜದ ಏಳಿಗೆಗಾಗಿ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 35 ಸಾಧಕರನ್ನು ಗುರುತಿಸಿ ಅವರ ಜೀವಮಾನ ಸಾಧನೆ, ಪಡೆದ ಪ್ರಶಸ್ತಿ-ಪುರಸ್ಕಾರಗಳ ಕುರಿತು ಕೃತಿಯಲ್ಲಿ ದಾಖಲಿಸಿರುವುದು ಜನ ಮೆಚ್ಚುಗೆಯ ಕಾರ್ಯವಾಗಿದೆ ಎಂದರು.
ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತ ರಾಜಶೇಖರ ಎಸ್. ಮಾತನಾಡಿ, ಇಂದಿನ ಸಾಧಕರ ಜೀವಮಾನ ಸಾಧನೆಗಳು ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಮಹಾನ್ ಕಾರ್ಯವಾಗಿದೆ ಹಾರೈಸಿದರು.
ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿ ಸವಿತಾಲಕ್ಷ್ಮೀ ಬೆಳಗಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಮಖಂಡಿ ರಾನಡೆ ಅವರಂತ ತತ್ವಜ್ಞಾನಿಯನ್ನು ಕೊಟ್ಟಂತ ನಾಡಾಗಿದೆ. ಶಿಕ್ಷಣ, ಸಾಹಿತ್ಯ, ಕ್ರೀಡೆ ಹಾಗೂ ಕಲಾವಿದರ ಕುರಿತು ವ್ಯಕ್ತಿಚಿತ್ರಣಕ್ಕೆ ಸೇರಬಹುದಾದ ಲೇಖನಗಳನ್ನು ಕೃತಿಯಲ್ಲಿ ದಾಖಲಿಸುವ ಮೂಲಕ ಕಾಲಾಂತರದಲ್ಲಿ ಸಾಧಕರು ಮರೆತು ಹೋಗಬಾರದೆಂಬ ಲೇಖಕರ ಕಳಕಳಿ ಮೆಚ್ಚುವಂತಹದ್ದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಸಾಧಕರ ಮೇಲೆ ಪಿಎಚ್.ಡಿ ಮಾಡುವ ಕಾರ್ಯಗಳು ಆಗಬೇಕು. ಸಾಧಕರ ಗ್ರಂಥಗಳು ರಚನೆಯಾಗಬೇಕು ಎಂದರು.
ಹಿರಿಯ ಪತ್ರಕರ್ತ ಡಾ.ಟಿ.ಪಿ. ಗಿರಡ್ಡಿ ಸಾಧಕ ರತ್ನ ಪ್ರಶಸ್ತಿ ಪಡೆದು ಅನಿಸಿಕೆ ಹಂಚಿಕೊಂಡರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಎನ್.ಆರ್. ಹಳ್ಳೂರ, ಸಾಹಿತಿ ಸಂಗಮೇಶ ಮಟೋಳಿ ಮಾತನಾಡಿದರು.
ಹಿರಿಯ ಪತ್ರಕರ್ತ ಎಂ.ಸಿ. ಗೊಂದಿ, ಹಿರಿಯ ಸಾಹಿತಿ ಬಸವರಾಜ ಯಡಹಳ್ಳಿ, ಡಾ.ಎಚ್.ಜಿ. ದಡ್ಡಿ, ಬಸವರಾಜ ಗಿರಗಾಂವಿ, ಎಂ.ಬಿ. ಇಂಡಿ, ಪ್ರವೀಣ ಕುಲಕರ್ಣಿ ಸೇರಿ 35 ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯಶಿಕ್ಷಕ ಭೂಷಣ ಪತ್ತಾರ, ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ, ಪ್ರೊ.ರಾಜಶೇಖರ ಹೊಸಟ್ಟಿ ಇದ್ದರು. ಸವಿತಾ ಶಿರಗುಪ್ಪಿ, ಎನ್.ಬಿ. ಮಾಲಗಾರ ನಿರೂಪಿಸಿದರು.
ಕಾರ್ಯಕ್ರಮದ ಮುಂಚೆ ನಗರದ ದೇಸಾಯಿ ಸರ್ಕಲ್‌ನಿಂದ ಅಶೋಕ ಸರ್ಕಲ್ ರಾನಡೆ ಭವನದ ವರೆಗೆ ಕರಡಿ ಮಜಲು ಸೇರಿ ವಿವಿಧ ವಾದ್ಯಮೇಳದೊಂದಿಗೆ ಜಮಖಂಡಿ ತಾಲ್ಲೂಕಿನ ಅಪರೂಪದವರು ಕೃತಿಗಳ ಮೆರವಣಿಗೆ ಜರುಗಿತು.