ಬಾಗಲಕೋಟೆ: ಹಾಡು ಹಗಲು ಹೊತ್ತಿನಲ್ಲಿ ಕಚೇರಿ ಕೆಲಸ ಪಕ್ಕಕ್ಕಿಟ್ಟು ಐಬಿಯಲ್ಲಿ ಗುತ್ತಿಗೆದಾರರ ಜೊತೆ ಸೇರಿಕೊಂಡು ಅಧಿಕಾರಿಗಳು ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನುವ ವಿಡಿಯೋ ಗಳು ಇದೀಗ ಜಿಲ್ಲೆಯಲ್ಲಿ ಹರಿದಾಡುತ್ತಿವೆ.
ಬುಧವಾರ ಮಧ್ಯಾಹ್ನ ಜಮಖಂಡಿ ಐಬಿಯಲ್ಲಿ ಜಿಪಂ ಕಚೇರಿಯ ಅಧಿಕಾರಿಗಳು ಎನ್ನಲಾದವರು, ಸ್ಥಳೀಯ ಗುತ್ತಿಗೆದಾರರ ಜೊತೆ ಸೇರಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಕಚೇರಿಯಲ್ಲಿ ಕೇಳಿದರೆ ಸಿಎಸ್ ಬಂದಿದ್ದಾರೆ, ಅವರನ್ನು ಭೇಟಿಯಾಗಲು ಅಧಿಕಾರಿಗಳು ಹೋಗಿದ್ದಾರೆ ಎನ್ನುವ ಉತ್ತರ ವಿಡಿಯೋದಲ್ಲಿ ಕೇಳಿ ಬರುತ್ತಿದೆ. ಅಧಿಕಾರಿಗಳು ಐಬಿಯಲ್ಲಿ ಮದ್ಯಪಾನ ಮಾಡುತ್ತಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ.
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಐಬಿಯಲ್ಲಿನ ಕೊಠಡಿಗಳನ್ನು ಯಾರಿಗೂ ಕೊಡಲ್ಲ. ಚುನಾವಣೆ ಕೆಲಸಕ್ಕೆ ಬಂದವರಿಗೆ ಅವುಗಳನ್ನು ಮೀಸಲು ಇಟ್ಟಿರುತ್ತಾರೆ. ಅಧಿಕಾರಿಗಳು ಆಗಿದ್ದರಿಂದ ಇಲ್ಲಿ ಅವರಿಗೆ ಕೊಠಡಿಗಳನ್ನು ಕೊಟ್ಟಿರಬಹುದು. ಆದರೆ, ಅಧಿಕಾರಿಗಳ ಜೊತೆಗೆ ಗುತ್ತಿಗೆದಾರರು ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸಮಗ್ರ ಪರಿಶೀಲನೆ ಮಾಡಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಅಲ್ಲಿ ಏನಾದರೂ ವ್ಯವಹಾರ ಮಾಡಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಯಲಿ ಎನ್ನುವ ಆಗ್ರಹ ಕೇಳಿ ಬರುತ್ತಿದೆ.