ದಾಂಡೇಲಿ: ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಡಿ ಜನ್ಧನ್ ಖಾತೆಗೆ 500 ರೂ. ಸಹಾಯಧನ ಜಮೆಯಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಗರದ ಬಹುತೇಕ ಬ್ಯಾಂಕ್ಗಳಿಗೆ ಫಲಾನುಭವಿಗಳು ಮುಗಿಬಿದ್ದ ಘಟನೆ ಮಂಗಳವಾರ ನಡೆಯಿತು. ಈ ವೇಳೆ ಸಾಮಾಜಿಕ ಅಂತರ ಮರೆತು ಗುಂಪಾಗಿದ್ದ ಜನರನ್ನು ಪೋಲೀಸರು ಹರಸಾಹಸಪಟ್ಟು ಜನರನ್ನು ಚದುರಿಸಿದರು.
ಆಯುಕ್ತರಿಂದ ಕೆಲ ಅಂಗಡಿಗಳು ಸೀಜ್: ನಗರಸಭೆಯ ಆಯುಕ್ತ ಡಾ. ಸೈಯದ್ ಜಾಹೇದ ಅಲಿ ನಗರದಲ್ಲಿ ಪರವಾನಗಿ ಇಲ್ಲದೆ ತೆರೆದಿದ್ದ ಅಂಗಡಿಗಳನ್ನು ಸೀಜ್ ಮಾಡಿದರು. ಅಲ್ಲದೆ, ಪಾಸ್ ಇಲ್ಲದೆ ನಗರದಲ್ಲಿ ವಿನಾಕಾರಣ ಸುತ್ತುವ ಬೈಕ್ಗಳನ್ನು ಸೀಜ್ ಮಾಡಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿಗೆ ಬರುವ ಟ್ರಕ್ಗಳಿಗೆ ನಿರ್ಬಂಧ: ವೇಸ್ಟ್ ಕೋಸ್ಟ್ ಪೇಪರ್ ಮಿಲ್ಲಿಗೆ ಬರುವ ಟ್ರಕ್ಗಳು ಕಾರ್ಖಾನೆಗೆ ಬರದಂತೆ ನಿರ್ಬಂಧನೆ ಹೇರಲಾಗಿದೆ ಎಂದು ತಹಸೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ. ಈ ಕುರಿತು ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅದೇಶ ಹೊರಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿಗೆ ಮಂಗಳವಾರ ಆಗಮಿಸಿದ 12 ಟ್ರಕ್ಗಳ ಚಾಲಕರು ಹಾಗೂ ಕ್ಲೀನರ್ಗಳನ್ನು ವಶಕ್ಕೆ ಪಡೆದು, ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ಅವರನ್ನು ಕಾರ್ಖಾನೆಯ ಡಿಲಕ್ಸ್ ವಸತಿ ಕೋಣೆಯಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಟ್ರಕ್ಗಳು ತುಮಕೂರು, ಹೊಸಪೇಟೆ, ಸಾಗರ, ಕೆಜಿಎಫ್ನಿಂದ ಬಂದಿವೆ ಎಂದು ತಿಳಿದು ಬಂದಿದೆ.